ಒಳಗೇನಿದೆ!?

ಹೋಟೆಲ್-ಪ್ರವಾಸೋದ್ಯಮ ಕ್ಷೇತ್ರದ ಗಣ್ಯರ ಜೊತೆ ಚರ್ಚಿಸಿದ ಸಿಎಂ; ಇಲ್ಲಿದೆ ಸಂಪೂರ್ಣ ವಿವರ..

ಹೋಟೆಲ್‌ ಕನ್ನಡ, ಬೆಂಗಳೂರು: ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಹೋಟೆಲ್‌ ಹಾಗೂ ಪ್ರವಾಸೋದ್ಯಮ ಕ್ಷೇತ್ರದ ಗಣ್ಯರೊಂದಿಗೆ ವ್ಯಾಪಕ ಚರ್ಚೆ ನಡೆಸಿದ್ದಾರೆ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿನ ಭೌಗೋಳಿಕ ಅನುಕೂಲತೆಗಳನ್ನು ಬಳಸಿಕೊಂಡು ಆ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಹೊಸಜೀವ ತುಂಬಲು ಇರುವ ಸಾಧ್ಯತೆಗಳ ಬಗ್ಗೆ ಸುದೀರ್ಘ ಸಿಎಂ ಸಮಾಲೋಚನೆ ನಡೆಸಿದ್ದಾರೆ.

ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್, ಕರಾವಳಿ ಮೂಲದ ಹೆಸರಾಂತ ನಟ-ನಿರ್ದೇಶಕ ರಿಷಬ್ ಶೆಟ್ಟಿ, ಶಾಸಕರಾದ ಜಿ.ಟಿ. ದೇವೇಗೌಡ, ಸತೀಶ್ ಸೈಲ್, ಸರ್ಕಾರದ ಮುಖ್ಯಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀನಿವಾಸ್, ಮುಖ್ಯಮಂತ್ರಿಗಳ ಅಪರ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ತ್ರಿಲೋಕ್ ಚಂದ್ರ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತ ಸಭೆಗೆ ಆಹ್ವಾನಿಸಲಾಗಿದ್ದ ನಟ-ನಿರ್ದೇಶಕ ರಿಷಬ್‌ ಶೆಟ್ಟಿ ಅವರಿಗೆ ಸಿಎಂ ಡಿ.ಕೆ.ಶಿವಕುಮಾರ್‌ ಅವರಿಂದ ಆತ್ಮೀಯ ಉಭಯಕುಶಲೋಪರಿ.

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಅಧ್ಯಕ್ಷ ಜಿ.ಕೆ.ಶೆಟ್ಟಿ, ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್‌, ಗೌರವ ಕಾರ್ಯದರ್ಶಿ ವೀರೇಂದ್ರ ಕಾಮತ್‌, ಕರ್ನಾಟಕ ಪ್ರವಾಸಿ ವಾಹನ ಮಾಲೀಕರ ಸಂಘದ ಅಧ್ಯಕ್ಷ ಕೆ.ರಾಧಾಕೃಷ್ಣ ಹೊಳ್ಳ, ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ ಮುಂತಾದವರನ್ನು ಸಿಎಂ ಈ ಸಭೆಗೆ ಆಹ್ವಾನಿಸಿದ್ದು, ಕರಾವಳಿ ಪ್ರವಾಸೋದ್ಯಮದ ಕುರಿತು ಸಲಹೆ, ಅಭಿಪ್ರಾಯಗಳನ್ನು ಸಂಗ್ರಹಿಸಿದ್ದಾರೆ. ಅಲ್ಲದೆ, ಕರಾವಳಿಯಲ್ಲಿ ಆಗಬೇಕಾದ ಅನುಕೂಲತೆಗಳ ಬಗ್ಗೆ ಹೋಟೆಲ್-ಪ್ರವಾಸೋದ್ಯಮ ಕ್ಷೇತ್ರದ ಗಣ್ಯರು ತಮ್ಮ ಬೇಡಿಕೆಗಳನ್ನು ಮುಖ್ಯಮಂತ್ರಿಯವರಿಗೆ ಸಲ್ಲಿಸಿದ್ದಾರೆ.

ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಅಧ್ಯಕ್ಷ ಜಿ.ಕೆ.ಶೆಟ್ಟಿ, ಬೆಂಗಳೂರು ಹೋಟೆಲುಗಳ ಸಂಘದ ಗೌರವ ಕಾರ್ಯದರ್ಶಿ ವೀರೇಂದ್ರ ಕಾಮತ್‌, ಎಫ್‌ಕೆಸಿಸಿಐ ಅಧ್ಯಕ್ಷೆ ಉಮಾ ರೆಡ್ಡಿ ಅವರಿಂದ ಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ತಮ್ಮ ಅಭಿಪ್ರಾಯಗಳ ಸಲ್ಲಿಕೆ.

ಇದೂ ಓದಿ: ಹೋಟೆಲೋದ್ಯಮಿಯ ನೇತೃತ್ವದಲ್ಲಿ ಬೃಹತ್‌ ದೇವತಾ ಕಾರ್ಯ, ನೀಲನಕ್ಷೆ ಅನಾವರಣ

ಈ ಎಲ್ಲ ಮಾತುಕತೆಗಳ ಬಳಿಕ ಕರಾವಳಿ ಪ್ರವಾಸೋದ್ಯಮ ಕುರಿತು ಭವಿಷ್ಯದ ಯೋಜನೆಗಳ ರೂಪುರೇಷೆ ಹಾಗೂ ಕಾರ್ಯಸಾಧ್ಯತೆಯ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಸಮಾಲೋಚನೆ ನಡೆಸಿ, ಕರಾವಳಿಯಲ್ಲಿ ಸಚಿವ ಸಂಪುಟ ಸಭೆ ನಡೆಸುವುದೂ ಸೇರಿದಂತೆ ತಮ್ಮ ಒಟ್ಟಾರೆ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.

ಪ್ರವಾಸೋದ್ಯಮ ಸಚಿವ ಕೆ.ಜೆ. ಜಾರ್ಜ್‌ ಅವರ ಜೊತೆ ಕರ್ನಾಟಕ ರಾಜ್ಯ ಪ್ರವಾಸಿ ವಾಹನ ಮಾಲೀಕರ ಸಂಘದ ಅಧ್ಯಕ್ಷ ಕೆ.ರಾಧಾಕೃಷ್ಣ ಹೊಳ್ಳ ಅವರ ಮಾತುಕತೆ.
ಸಿಎಂ ಡಿ.ಕೆ.ಶಿವಕುಮಾರ್‌ ಅವರನ್ನು ಭೇಟಿಯಾದ ಕೆಎಸ್‌ಟಿಒಎ ಅಧ್ಯಕ್ಷ ಕೆ.ರಾಧಾಕೃಷ್ಣ ಹೊಳ್ಳ.
ಸಭೆಯಲ್ಲಿ ವ್ಯಕ್ತವಾದ ಮುಖ್ಯಮಂತ್ರಿಯವರ ಒಟ್ಟಾರೆ ಅಭಿಪ್ರಾಯ
  • ಕರಾವಳಿಯಲ್ಲಿ ಸಚಿವ ಸಂಪುಟ ಸಭೆ ನಡೆಸಲು ನಿರ್ಧರಿಸಿದ್ದೇನೆ. ಸಭೆಗೆ ಮುನ್ನ ಸಿಆರ್‌ಝಡ್‌ ಮತ್ತು ಅರಣ್ಯ ಇಲಾಖೆಯಿಂದ ಆಗುತ್ತಿರುವ ತಾಂತ್ರಿಕ ತಕರಾರುಗಳ ಬಗ್ಗೆ 15-20 ದಿನಗಳಲ್ಲಿ ವರದಿ ಸಿದ್ದಪಡಿಸಿ, ಸಮಸ್ಯೆಗಳು ಮತ್ತು ಪರಿಹಾರಗಳನ್ನು ರೂಪಿಸಬೇಕು.
  • ಹೂಡಿಕೆದಾರರಿಗೆ ಸುಗಮವಾದ ಮತ್ತು ಸರಳವಾದ ಮಾರ್ಗಗಳನ್ನು ಸೃಜಿಸಬೇಕು. ಉದ್ಯಮಿಗಳಿಗೆ ಆಗುತ್ತಿರುವ ಇಲಾಖಾ ಕಿರಿಕಿರಿಗಳಿಗೆ ಪರಿಹಾರ ಕಂಡು ಹಿಡಿಯಬೇಕು.
  • ಕರಾವಳಿ ಸಂಸ್ಕೃತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮಾಡುವುದರ ಜತೆಗೆ ಹೆಚ್ಚು ಉದ್ಯೋಗ ಸೃಷ್ಟಿ, ಆರ್ಥಿಕ ಬೆಳವಣಿಗೆಗೆ ಆದ್ಯತೆ ನೀಡಲು ನಾವು ಬಯಸಿದ್ದೇವೆ.
  • ಸದ್ಯ ಅನುಮೋದಿಸಿರುವ 45 ಯೋಜನೆಗಳಿಂದ 4,500 ಉದ್ಯೋಗ ಸೃಷ್ಟಿಯಾಗುತ್ತದೆ. ಈ ಪ್ರಮಾಣ ಇನ್ನಷ್ಟು ಹೆಚ್ಚಾಗಬೇಕಿದೆ.
  • ಅತಿ ಉದ್ದದ ಸಮುದ್ರ ತೀರಗಳು ಇರುವ ಪ್ರದೇಶಗಳಲ್ಲಿ ರಾಜ್ಯದ ಕರಾವಳಿಯೂ ಸೇರಿದೆ. ನಮ್ಮ ಪರಿಸರಕ್ಕೆ ಧಕ್ಕೆ ಆಗದಂತೆ ಸಮುದ್ರ ತೀರಗಳನ್ನು ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಪರಿಗಣಿಸಿ, ಯೋಜನೆ ರೂಪಿಸಬೇಕು.
  • ಅಭಿವೃದ್ಧಿ ಯೋಜನೆಗಳಿಗೆ ತಾಂತ್ರಿಕ ತೊಂದರೆ ಆಗದಂತೆ ನಾನಾ ಅನುಮತಿಗಳನ್ನು ಪಡೆಯಲು ಏಕ ಗವಾಕ್ಷಿ (ಸಿಂಗಲ್‌ ವಿಂಡೋ) ವ್ಯವಸ್ಥೆ ಜಾರಿ ಮಾಡುವುದು ಉತ್ತಮ.
  • ಕರ್ನಾಟಕ ಪ್ರವಾಸೋದ್ಯಮ ನೀತಿಯಡಿಯಲ್ಲಿ 718.62 ಕೋಟಿ ರೂಪಾಯಿ ಅಂದಾಜು ಹೂಡಿಕೆಯ 45 ಯೋಜನೆಗಳನ್ನು ಅನುಮೋದಿಸಲಾಗಿದೆ.
  • ಕರಾವಳಿ ಮೇಳಗಳು, ಉತ್ಸವಗಳು, ಕರಾವಳಿ ಸಂಸ್ಕೃತಿ, ಆಚರಣೆ, ಹೆಮ್ಮೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮತ್ತು ಪ್ರಚಾರ ಮಾಡಬೇಕು.
  • ಸರ್ಕಾರದ ಈ ಮಹತ್ವಾಕಾಂಕ್ಷೆಯನ್ನು ಸಾಧಿಸಲು ಮತ್ತು ಬಂಡವಾಳ ಆಕರ್ಷಿಸಲು ಸಹಾಯಧನ, ಬಡ್ಡಿ ಸಹಾಯಧನ ಮತ್ತು ರಿಯಾಯ್ತಿಗಳ ಮೂಲಕ ಪ್ರೋತ್ಸಾಹಗಳನ್ನು ನೀಡುವ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳಲಾಗುವುದು.

ಇದೂ ಓದಿ: ಸರ್ಕಾರಿ ಆದೇಶದ ವಿರುದ್ಧ ಹೈಕೋರ್ಟ್‌ ಮೆಟ್ಟಿಲೇರಿದ ಬೆಂಗಳೂರು ಹೋಟೆಲುಗಳ ಸಂಘ

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ಇದೂ ಓದಿ: ಫೀನಿಕ್ಸ್‌ನಂತೆ ಮತ್ತೆ ಎದ್ದು ನಿಂತ ‘ಶುದ್ಧ ತಿಂಡಿ’: ಸುಟ್ಟು‌ ಹೋಗಿದ್ದ ಹೋಟೆಲ್‌ ಮರು ಆರಂಭ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ