ಹೋಟೆಲ್ ಕನ್ನಡ, ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ʼಕುಂದಾಪ್ರ ಕನ್ನಡ ಪ್ರತಿಷ್ಠಾನ (ರಿ.)ʼ ಪ್ರತಿ ವರ್ಷ ಆಚರಿಸಿಕೊಂಡು ಬರುತ್ತಿರುವ ʼವಿಶ್ವ ಕುಂದಾಪ್ರ ಕನ್ನಡ ಹಬ್ಬʼಕ್ಕೆ ಮತ್ತೊಮ್ಮೆ ಅರಮನೆ ಮೈದಾನದ ರಾಜ ವೈಭೋಗ ಲಭ್ಯವಾಗಲಿರುವುದು ಖಚಿತವಾಗಿದೆ.
ʼಕುಂದಾಪ್ರ ಕನ್ನಡ ಪ್ರತಿಷ್ಠಾನʼ ಬೆಂಗಳೂರಿನ ವಿಜಯನಗರದ ಬಂಟರ ಸಂಘದಲ್ಲಿ ಆಗಸ್ಟ್ 15ರ ಶನಿವಾರ ಆಯೋಜಿಸಿದ್ದ ʼವಿಶ್ವ ಕುಂದಾಪ್ರ ಕನ್ನಡ ದಿನಾಚರಣೆʼಯಲ್ಲಿ ಆ ಕುರಿತ ನಿಚ್ಚಳ ಮಾಹಿತಿ ಹೊರಹೊಮ್ಮಿದೆ. ಅರ್ಥಾತ್, ಈ ಸಲದ ಅಂದರೆ ಮುಂದಿನ ʼವಿಶ್ವ ಕುಂದಾಪ್ರ ಕನ್ನಡ ಹಬ್ಬʼದ ಕುರಿತು ಬೃಹತ್ ಘೋಷಣೆ ವೇಳೆ ಸ್ಥಳ-ದಿನಾಂಕಗಳ ಮಾಹಿತಿ ಬಹಿರಂಗಪಡಿಸಲಾಗಿದೆ.
‘ವಿಶ್ವದ ಎಲ್ಲ ಕಡೆಯಲ್ಲಿ ನಡೆಯುತ್ತಿರುವ ಕುಂದಾಪ್ರ ಕನ್ನಡ ದಿನಾಚರಣೆಯನ್ನು ಬೃಹತ್ ಪ್ರಮಾಣದಲ್ಲಿ ಒಂದೇ ಕಡೆ ಆಯೋಜಿಸಿದರೆ ಹೇಗೆ ಎಂಬ ಕಲ್ಪನೆ-ಕನಸಿನಲ್ಲಿ ಈ ಸಾಹಸಕ್ಕೆ ಮುಂದಾಗಿದ್ದೇವೆ’ ಎಂದು ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅಧ್ಯಕ್ಷ ಡಾ.ದೀಪಕ್ ಶೆಟ್ಟಿ ಬಾರ್ಕೂರು ಘೋಷಿಸಿದ್ದಾರೆ.

ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಖ್ಯಾತ ಸಂಗೀತ ನಿರ್ದೇಶಕ ರವಿ ಬಸ್ರೂರು, ನಾಯಕ ನಟ ನಿರಂಜನ ಸುಧೀಂದ್ರ, ನಟ-ನಿರ್ಮಾಪಕ ಪ್ರಮೋದ್ ಶೆಟ್ಟಿ, ಚಿತ್ರಸಾಹಿತಿ ಪ್ರಮೋದ್ ಮರವಂತೆ, ಎ.ಎಸ್.ಕೇಟರರ್ಸ್‌ನ ಸತೀಶ್ ಶೆಟ್ಟಿ ಮತ್ತು ಅಮರನಾಥ ಶೆಟ್ಟಿ ಹೆಗ್ಗುಂಜೆ ಮುಂತಾದ ಗಣ್ಯರ ಸಮ್ಮುಖದಲ್ಲಿ ವಿಭಿನ್ನ ರೀತಿಯಲ್ಲಿ ವಿಶ್ವ ಕುಂದಾಪ್ರ ಕನ್ನಡ ಸಮ್ಮೇಳನ-2027ರ ಬೃಹತ್ ಘೋಷಣೆ ಮಾಡಲಾಯಿತು.
ಇದೂ ಓದಿ: ಮತ್ತದೇ ಬೇಸರ.. ಮನಸು ಗಾಂಧಿಬಜಾರು.. ಮರಳೀತೇ ನಿತ್ಯೋತ್ಸವ?
ಈ ಸಂದರ್ಭದಲ್ಲಿ ಕುಂದಾಪ್ರ ಕನ್ನಡ ಪ್ರತಿಷ್ಠಾನದ ಉದಯಕುಮಾರ್ ಹೆಗ್ಡೆ, ಉಪಾಧ್ಯಕ್ಷ ನರಸಿಂಹ ಬೀಜಾಡಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕಾಂಚನ್, ಖಜಾಂಚಿ ವಿಜಯ್ ಶೆಟ್ಟಿ ಹಾಲಾಡಿ, ಜಂಟಿ ಕಾರ್ಯದರ್ಶಿ ಅಜಿತ್ ಶೆಟ್ಟಿ ಉಳ್ತೂರು ಮುಂತಾದವರು ಉಪಸ್ಥಿತರಿದ್ದರು. ಅಲ್ಲದೆ ಸಹಸ್ರಾರು ಸಂಖ್ಯೆಯ ಕುಂದಾಪುರಿಗರು ಈ ಬೃಹತ್ ಘೋಷಣೆಗೆ ಸಾಕ್ಷಿಯಾದರು.

ತ್ರಿಪುರವಾಸಿನಿಯಲ್ಲಿ ʼರಾಯಲ್ʼ ಕುಂದಾಪ್ರ ಕನ್ನಡ ಸಮ್ಮೇಳನ
ಈ ಸಲದ ವಿಶ್ವ ಕುಂದಾಪ್ರ ಕನ್ನಡ ಹಬ್ಬವು ʼನಮ್ಮಬ್ಬಿ ಬಾಷಿಯ ಜಾಗತಿಕ ಜಾತ್ರೆʼ ಆಗಿರಲಿದೆ ಎಂದ ಡಾ.ದೀಪಕ್ ಶೆಟ್ಟಿ, ಅದನ್ನು ‘ವಿಶ್ವ ಕುಂದಾಪ್ರ ಕನ್ನಡ ಸಮ್ಮೇಳನ-2027’ ಎಂಬ ಹೆಸರಿನಲ್ಲಿ ಆಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.
ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?
ಅರಮನೆ ಮೈದಾನದ ರಾಯಲ್ ತ್ರಿಪುರವಾಸಿನಿಯಲ್ಲಿ 2027ರ ಜನವರಿ 30-31ರಂದು ಹಿಂದೆಂದಿಗಿಂತಲೂ ಅದ್ಭುತ ರೀತಿಯಲ್ಲಿ ‘ವಿಶ್ವ ಕುಂದಾಪ್ರ ಕನ್ನಡ ಸಮ್ಮೇಳನ-2027’ ನಡೆಯಲಿದೆ. ಇದರಲ್ಲಿ ಸುಮಾರು ಮೂರು ಲಕ್ಷಕ್ಕೂ ಅಧಿಕ ಜನರು ಸೇರುವ ನಿರೀಕ್ಷೆ ಇದೆ ಎಂದೂ ತಿಳಿಸಿದರು.
ʼವಿಶ್ವ ಕುಂದಾಪ್ರ ಕನ್ನಡ ಸಮ್ಮೇಳನ-2027ʼರ ಆಯೋಜನೆಗಾಗಿ ಸ್ಥಳ ಪ್ರಾಯೋಜಕತ್ವವನ್ನು ಖ್ಯಾತ ಉದ್ಯಮಿ, ಎ.ಎಸ್. ಕೇಟರರ್ಸ್‌ನ ಸತೀಶ್ ಶೆಟ್ಟಿ ವಹಿಸಿಕೊಳ್ಳಲಿದ್ದು, ಅವರನ್ನು ಈ ಬೃಹತ್ ಘೋಷಣೆ ಸಂದರ್ಭದಲ್ಲಿ ʼಕುಂದಾಪ್ರ ಕನ್ನಡ ಪ್ರತಿಷ್ಠಾನʼ ವತಿಯಿಂದ ಸನ್ಮಾನಿಸಲಾಯಿತು.

ಸತೀಶ್ ಶೆಟ್ಟಿ ಅವರು ಅರಮನೆ ಮೈದಾನದಲ್ಲಿನ ತ್ರಿಪುರ ವಾಸಿನಿ ಸಭಾಂಗಣವನ್ನು ನವೀಕರಿಸಿ ರಾಯಲ್ ತ್ರಿಪುರ ವಾಸಿನಿ ಆಗಿಸಿದ್ದು, ಆ ಸ್ಥಳದಲ್ಲಿ ವಿಶ್ವ ಕುಂದಾಪ್ರ ಕನ್ನಡ ಸಮ್ಮೇಳನ-2027ರ ಆಯೋಜನೆಗೆ ಅವಕಾಶ ನೀಡಲಿದ್ದಾರೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ರಾಘವೇಂದ್ರ ಕಾಂಚನ್ ತಿಳಿಸಿದ್ದಾರೆ.
ಇದೂ ಓದಿ: ಉದ್ಯಮಿ ಪ್ರಕಾಶ್ ಶೆಟ್ಟಿ ಅವರಿಗೆ ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್
ಈ ರಾಯಲ್ ತ್ರಿಪುರವಾಸಿನಿ 8 ಸಾವಿರ ಮಂದಿ ಕುಳಿತುಕೊಳ್ಳಬಹುದಾದ ಆಸನ ವ್ಯವಸ್ಥೆ ಹೊಂದಿರುವುದಷ್ಟೇ ಅಲ್ಲದೆ, ಹೊರಪೌಳಿಯಲ್ಲಿ ಸುಮಾರು 8 ಎಕರೆ ವಿಶಾಲ ಜಾಗ ಕೂಡ ಇರುವುದರಿಂದ ಅದು ಕೂಡ ಅದ್ಧೂರಿ ಕುಂದಾಪ್ರ ಕನ್ನಡ ಸಮ್ಮೇಳನಕ್ಕೆ ಲಭ್ಯವಾಗಲಿದೆ ಎಂದೂ ಕಾಂಚನ್ ತಿಳಿಸಿದ್ದಾರೆ.

ಇದೂ ಓದಿ: ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ನೂತನ ಅಧ್ಯಕ್ಷ ಜಿ.ಕೆ. ಶೆಟ್ಟಿ ಅವರಿಗೆ ಬಿಎಚ್‌ಎ ಅಭಿನಂದನೆ
ವಿಶ್ವ ಕುಂದಾಪ್ರ ಕನ್ನಡ ಹಬ್ಬವನ್ನು ಕಳೆದ ಎಂಟು ವರ್ಷಗಳಿಂದ ಆಚರಿಸಿಕೊಂಡು ಬರಲಾಗುತ್ತಿದ್ದು, ಮೊದಲ ನಾಲ್ಕು ವರ್ಷ ಅದನ್ನು ಬಂಟರ ಸಂಘದಲ್ಲಿ ಆಯೋಜಿಸಲಾಗಿತ್ತು. ನಂತರ ಕೋವಿಡ್ ಕಾರಣಕ್ಕೆ ಮಧ್ಯೆ ಒಂದು ವರ್ಷ ಆಚರಿಸಿರಲಿಲ್ಲ. ಬಳಿಕ ಎರಡು ವರ್ಷ ಅರಮನೆ ಮೈದಾನದಲ್ಲಿ, ಕಳೆದ ವರ್ಷ ನಂದಿ ಲಿಂಕ್ ಗ್ರೌಂಡ್‌ನಲ್ಲಿ ಹಾಗೂ ಈ ವರ್ಷ ವಿಶ್ವ ಕುಂದಾಪ್ರ ಕನ್ನಡ ಹಬ್ಬದ ಬೃಹತ್ ಘೋಷಣೆಯನ್ನು ಮತ್ತೆ ಬಂಟರ ಸಂಘದಲ್ಲಿ ಆಯೋಜಿಸಲಾಗಿದೆ ಎಂದು ಶನಿವಾರ ಡಾ.ದೀಪಕ್ ಶೆಟ್ಟಿ ಮಾಹಿತಿ ನೀಡಿದ್ದಾರೆ.
ವಿಶೇಷವೆಂದರೆ ವಿಶ್ವ ಕುಂದಾಪ್ರ ಕನ್ನಡ ಹಬ್ಬಕ್ಕೆ ಮೊದಲ ಸಲ ಅರಮನೆ ಮೈದಾನದ ರಾಜ ವೈಭೋಗ ಒದಗಿಸಿದವರು ಎ.ಎಸ್. ಕೇಟರರ್ಸ್‌ನ ಸತೀಶ್ ಶೆಟ್ಟಿ. ಅಂದರೆ ಅಂದು 2024ರಲ್ಲಿ ಅರಮನೆ ಮೈದಾನದ ವೈಟ್ ಪೆಟಲ್ಸ್‌ನಲ್ಲಿ ಸ್ಥಳ ಪ್ರಾಯೋಜಕತ್ವ ವಹಿಸಿ ಅದ್ಧೂರಿ ಆಚರಣೆಗೆ ಉತ್ತೇಜನ ತುಂಬಿದ್ದರು. ಇದೀಗ ಮತ್ತದೇ ಅರಮನೆ ಮೈದಾನದಲ್ಲಿ ಇನ್ನೂ ಅದ್ಧೂರಿಯಾಗಿ ವಿಶ್ವ ಕುಂದಾಪ್ರ ಕನ್ನಡ ಹಬ್ಬ ಆಚರಣೆಗೆ ಸತೀಶ್ ಶೆಟ್ಟಿ ಅವಕಾಶ ಮಾಡಿಕೊಡಲಿದ್ದಾರೆ.
ಇದೂ ಓದಿ: ಅರಮನೆ ಮೈದಾನದಲ್ಲೇ ಕುಂದಾಪ್ರ ಕನ್ನಡ ಹಬ್ಬ; ಆಯೋಜನೆ ಸಾಧ್ಯವಾಗಿದ್ದು ಹೇಗೆ?
ನಿಜ.. ಇವೆಲ್ಲವೂ ಕುಂದಾಪ್ರ ಕನ್ನಡ ಪ್ರತಿಷ್ಠಾನದ ಅದ್ಭುತ ಆಯೋಜನೆ, ಸತೀಶ್ ಶೆಟ್ಟಿ ಅವರಂಥ ಉದ್ಯಮಿಗಳ ಭಾರಿ ಪ್ರಾಯೋಜನೆಗಳಿಂದ ಸಾಧ್ಯವಾಗುತ್ತಿದ್ದರೂ ಇವೆಲ್ಲವೂ ಯಶಸ್ವಿ ಆಗುವುದು ಬೃಹತ್ ಜನಸ್ತೋಮದಿಂದ.. ಅರ್ಥಾತ್, ವಿಶ್ವ ಕುಂದಾಪ್ರ ಕನ್ನಡ ಹಬ್ಬಕ್ಕೆ ಸಾಗರೋಪಾದಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ಕುಂದಗನ್ನಡಿಗರು ಮತ್ತು ಕುಂದಗನ್ನಡದ ಅಭಿಮಾನಿಗಳಿಂದ. ನಾವೆಲ್ಲರೂ ಅಂಥ ಮತ್ತೊಂದು ಬಹುನಿರೀಕ್ಷಿತ ಜನಜಾತ್ರೆಯ ನಿರೀಕ್ಷೆಯಲ್ಲಿದ್ದೇವೆ.
ʼನಮ್ಮಬ್ಬಿ ಬಾಷಿಯ ಜಾಗತಿಕ ಜಾತ್ರೆʼ ʼವಿಶ್ವ ಕುಂದಾಪ್ರ ಕನ್ನಡ ಸಮ್ಮೇಳನ-2027ʼರ ಬಗ್ಗೆ ನಮಗಷ್ಟೇ ಅಲ್ಲ, ನಿಮಗೂ ಭಾರಿ ನಿರೀಕ್ಷೆ ಇದೆ. ಸದ್ಯಕ್ಕೆ ಆ ನಿರೀಕ್ಷೆಯಲ್ಲೇ ಸುಖಿಸೋಣ, ನಿರೀಕ್ಷೆಯಲ್ಲಿ ಸುಖವಿದೆ…

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ
ಕುಂದಾಪ್ರ ಕನ್ನಡ ಪ್ರತಿಷ್ಠಾನ (ರಿ.)
ಇದು ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ ಹಿನ್ನೆಲೆಯಲ್ಲಿ ವಿಶೇಷವಾಗಿ ರಚನೆಗೊಂಡ ಹಾಗೂ ನೋಂದಾಯಿತ ಪ್ರತಿಷ್ಠಾನ. ಸುದೀಕ್ಷಾ ಕನ್‌ವೆನ್ಷನ್ ಸೆಂಟರ್‌ನ ಡಾ.ದೀಪಕ್ ಶೆಟ್ಟಿ ಬಾರ್ಕೂರು ಈ ಪ್ರತಿಷ್ಠಾನದ ಅಧ್ಯಕ್ಷರಾಗಿದ್ದು, ಉದಯಕುಮಾರ್ ಶೆಟ್ಟಿ ಅವರು ಈ ಪ್ರತಿಷ್ಠಾನದ ಗೌರವಾಧ್ಯಕ್ಷರಾಗಿದ್ದಾರೆ. ಉಪಾಧ್ಯಕ್ಷರಾಗಿ ಹೋಟೆಲ್ ಉದ್ಯಮಿ ನರಸಿಂಹ ಬೀಜಾಡಿ, ಖಜಾಂಚಿಯಾಗಿ ಹಾಲಾಡಿ ವಿಜಯ್ ಶೆಟ್ಟಿ, ಕಾರ್ಯದರ್ಶಿಯಾಗಿ ಹೋಟೆಲ್ ಉದ್ಯಮಿ ರಾಘವೇಂದ್ರ ಕಾಂಚನ್ ಹಾಗೂ ಜಂಟಿ ಕಾರ್ಯದರ್ಶಿಯಾಗಿ ಅಜಿತ್ ಶೆಟ್ಟಿ ಉಳ್ತೂರು ಕಾರ್ಯನಿರ್ವಹಿಸುತ್ತಿದ್ದಾರೆ.
ಇದೂ ಓದಿ: ಹೋಟೆಲೋದ್ಯಮಿಯ ನೇತೃತ್ವದಲ್ಲಿ ಬೃಹತ್ ದೇವತಾ ಕಾರ್ಯ, ನೀಲನಕ್ಷೆ ಅನಾವರಣ
ಇದೂ ಓದಿ: ʼಹಳ್ಳಿಮನೆʼ ಸಂಜೀವ ರಾವ್ ಅವರಿಗೆ ʼಬಿಎಚ್‌ಎ ಜೀವಮಾನದ ಸಾಧನೆ ಪ್ರಶಸ್ತಿʼ
ಇದೂ ಓದಿ: ‘ದರ್ಶಿನಿ ಬ್ರಹ್ಮ’ ಆರ್. ಪ್ರಭಾಕರ್ ಅವರಿಗೆ ‘ಅಸಾಮಾನ್ಯ ಕನ್ನಡಿಗ’ ಪುರಸ್ಕಾರ



