ಒಳಗೇನಿದೆ!?

ಆಹಾರದಲ್ಲಿ ಕೂದಲು: ಪ್ರಶ್ನಿಸಿದ ಕನ್ನಡಿಗರ ಮೇಲೆ ಒಡಿಶಾದ ಪುರಿ ಹೋಟೆಲ್‌ನಲ್ಲಿ ತೀವ್ರ ಹಲ್ಲೆ

ಹಲ್ಲೆಗೀಡಾದ ಭರತ್‌ಚಂದ್ರ, ಸುಸ್ಮಿತಾ

ಹೋಟೆಲ್‌ ಕನ್ನಡ, ಬೆಂಗಳೂರು: ಆಹಾರದಲ್ಲಿ ಕೂದಲು ಇದ್ದಿದ್ದನ್ನು ಪ್ರಶ್ನಿಸಿ ಬದಲಿ ಆಹಾರ ಕೇಳಿದ ಕರ್ನಾಟಕದ ದಂಪತಿ ಮೇಲೆ ಒಡಿಶಾದ ಪುರಿಯ ಹೋಟೆಲ್ ಸಿಬ್ಬಂದಿ ಭೀಕರವಾಗಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.

ಹಲ್ಲೆಗೊಳಗಾದವರನ್ನು ಮೈಸೂರು ಮೂಲದ ಸಿ. ಭರತ್ ಚಂದ್ರ ಹಾಗೂ ಅವರ ಏಳು ತಿಂಗಳ ಗರ್ಭಿಣಿ ಪತ್ನಿ ಸುಸ್ಮಿತಾ ಆರ್. ಎಂದು ಗುರುತಿಸಲಾಗಿದೆ. ಹಲ್ಲೆಯಿಂದಾಗಿ ಗರ್ಭಿಣಿ ಸುಸ್ಮಿತಾ ಅವರ ತೀವ್ರ ಗಾಯಗಳಾಗಿವೆ.

ಇದೂ ಓದಿ: ಮತ್ತದೇ ಬೇಸರ.. ಮನಸು ಗಾಂಧಿಬಜಾರು.. ಮರಳೀತೇ ನಿತ್ಯೋತ್ಸವ?

ಘಟನೆ ವಿವರ: ಮೈಸೂರಿನಿಂದ ಪ್ರವಾಸಕ್ಕೆ ತೆರಳಿದ್ದ ಕುಟುಂಬವು ಒಡಿಶಾದ ಪುರಿ ಜಗನ್ನಾಥನ ದರ್ಶನ ಪಡೆದು, ಸಮುದ್ರ ತೀರದ ಬಳಿ ಇರುವ ‘ಟೇಸ್ಟ್ ಆಫ್ ಬೆಂಗಾಲ್’ ಹೋಟೆಲ್‌ಗೆ ಊಟಕ್ಕೆ ತೆರಳಿದ್ದರು. ಈ ವೇಳೆ ಪೂರೈಸಿದ ಆಹಾರದಲ್ಲಿ ತಲೆಗೂದಲು ಕಂಡುಬಂದಿದ್ದರಿಂದ, ಅದನ್ನು ಬದಲಾಯಿಸಿಕೊಡುವಂತೆ ಸಿಬ್ಬಂದಿಯನ್ನು ವಿನಂತಿಸಿದ್ದಾರೆ. ಆದರೆ ಹೋಟೆಲ್ ಸಿಬ್ಬಂದಿ ಆಹಾರ ಬದಲಾಯಿಸಲು ಹೆಚ್ಚುವರಿ ಹಣ ಪಾವತಿಸುವಂತೆ ಪಟ್ಟು ಹಿಡಿದಿದ್ದಾರೆ.

ಸೂಕ್ತ ಆಹಾರ ನೀಡದೆ ಹೆಚ್ಚುವರಿ ಹಣ ನೀಡುವುದಿಲ್ಲ ಎಂದು ಪ್ರವಾಸಿಗರು ಹೇಳಿದಾಗ, ಹೋಟೆಲ್ ಸಿಬ್ಬಂದಿ ಶಟರ್ ಎಳೆದು ದಂಪತಿ ಹಾಗೂ ಕುಟುಂಬದವರ ಮೇಲೆ ಸಲಾಕೆಯಿಂದ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ.

ಇದೂ ಓದಿ: ಹೋಟೆಲಿಗರು, ಫಾರ್ಮಸಿಯವರಿಗೆ ಆರೋಗ್ಯ ಸಚಿವರಿಂದ ಮತ್ತೆ ತಾಕೀತು..

ಈ ದಾಳಿಯನ್ನು ಮೊಬೈಲ್‌ಫೋನ್‌ನಲ್ಲಿ ವೀಡಿಯೊ ಚಿತ್ರೀಕರಿಸಲು ಯತ್ನಿಸಿದಾಗ ಸುಸ್ಮಿತಾ ಅವರ ಮೇಲೂ ದಾಳಿ ನಡೆಸಲಾಗಿದೆ. ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಪೊಲೀಸರು ಸಂತ್ರಸ್ತರನ್ನು ರಕ್ಷಿಸಿ, ಸ್ಥಳೀಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ಇದೂ ಓದಿ: ವಿಶ್ವ ಕುಂದಾಪ್ರ ಕನ್ನಡ ಹಬ್ಬಕ್ಕೆ ಮತ್ತೆ ʼಅರಮನೆʼಯ ರಾಜ ವೈಭೋಗ; ಕಾರಣಕರ್ತರಿವರು..

ನ್ಯಾಯಕ್ಕಾಗಿ ಸಂತ್ರಸ್ತರ ಮನವಿ: “ನಾವು ದೇವರ ಆಶೀರ್ವಾದ ಪಡೆಯಲು ಪುರಿಗೆ ಬಂದಿದ್ದೆವು. ಆದರೆ ಇಲ್ಲಿ ಮಹಿಳೆಯರಿಗೆ ಸುರಕ್ಷತೆಯೇ ಇಲ್ಲದಿರುವುದು ಅತ್ಯಂತ ದುರದೃಷ್ಟಕರ. ಕಳಪೆ ಆಹಾರಕ್ಕೆ ಹಣ ಏಕೆ ನೀಡಬೇಕು ಎಂದು ಪ್ರಶ್ನಿಸಿದ್ದಕ್ಕೆ ಮತ್ತು ಹಲ್ಲೆಯ ವೀಡಿಯೊ ಮಾಡಿದ್ದಕ್ಕೆ ನಮ್ಮ ಮೇಲೆ ಹೋಟೆಲ್ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ. ನಮಗೆ ನ್ಯಾಯ ಸಿಗುವಂತೆ ಪುರಿ ಪೊಲೀಸರು ಕ್ರಮ ಕೈಗೊಳ್ಳಬೇಕು. ನಾವು ಇನ್ಮುಂದೆ ಎಂದಿಗೂ ಪುರಿಗೆ ಬರುವುದಿಲ್ಲ” ಎಂದು ಸಂತ್ರಸ್ತೆ ಸುಸ್ಮಿತಾ ಅಳಲು ತೋಡಿಕೊಂಡಿದ್ದಾರೆ. ನಾವು ಮೈಸೂರಿನಿಂದ 13 ಮಂದಿ ಬಂದಿದ್ದು, ಅಷ್ಟೂ ಜನರಿಗೆ ಶಟರ್‌ ಕ್ಲೋಸ್‌ ಮಾಡಿ ಥಳಿಸಿದ್ದಾರೆ ಎಂದು ಭರತ್‌ಚಂದ್ರ ತಿಳಿಸಿದ್ದಾರೆ.

ಪ್ರಕರಣ ದಾಖಲು: ಈ ಸಂಬಂಧ ಪುರಿಯ ಸೀ ಬೀಚ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ಸಂಪೂರ್ಣ ದೃಶ್ಯಾವಳಿಗಳು ಮೊಬೈಲ್‌ಫೋನ್‌ ಹಾಗೂ ಹೋಟೆಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಘಟನೆಗೆ ಕಾರಣರಾದವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸೀ ಬೀಚ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮಾನಸ್‌ಚಕ್ರ ತಿಳಿಸಿದ್ದಾರೆ.

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಇದೂ ಓದಿ: ಅಯೋಧ್ಯೆಯಲ್ಲಿ ‘ಬೆಂಗಳೂರು ಕೆಫೆ’: ರಾಮ ಜನ್ಮಭೂಮಿಯಲ್ಲಿ ಈಗ ಉಡುಪಿಯ ನೈಜ ರುಚಿಯ ಹೋಟೆಲ್

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ