ಬೆಂಗಳೂರು: ಭಾರತದ ಅತ್ಯಂತ ಗೌರವಾನ್ವಿತ ಹಾಗೂ ದಿಗ್ಗಜ ಉದ್ಯಮಿ, ಟಾಟಾ ಸನ್ಸ್ನ ಎಮಿರಿಟಸ್ ಚೇರ್ಮನ್ ರತನ್ ಟಾಟಾ ಅವರು ನಿನ್ನೆಯಷ್ಟೇ ವಿಧಿವಶರಾಗಿದ್ದು, ಅವರಿಗೆ ದೇಶದ ಅಸಂಖ್ಯಾತ ಜನರು ಸಂತಾಪ ಸೂಚಿಸಿ ಕಂಬನಿ ಮಿಡಿಯುತ್ತಿದ್ದಾರೆ. ಅಲ್ಲದೆ, ಅವರ ವ್ಯಕ್ತಿತ್ವದ ಮಹೋನ್ನತ ಗುಣಗಳನ್ನು ನೆನಪಿಸಿಕೊಂಡು ಆ ಮೂಲಕವೂ ಹಲವರು ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ಪರಿಣಾಮವಾಗಿ ರತನ್ ಟಾಟಾ ಅವರ ಅದೆಷ್ಟೋ ಉದಾತ್ತ ಕಾರ್ಯಗಳು ಮತ್ತೊಮ್ಮೆ ಮುನ್ನೆಲೆಗೆ ಬಂದು ಜನರು ಅವರನ್ನು ಮತ್ತಷ್ಟು ಮೆಚ್ಚುವಂತಾಗುವ ಬೆಳವಣಿಗೆಗಳು ಗೋಚರಿಸುತ್ತಿವೆ. ಆ ಪೈಕಿ ಮುಂಬೈನ ತಾಜ್ ಹೋಟೆಲ್ ಮೇಲೆ ನಡೆದ ಭಯೋತ್ಪಾದಕ ದಾಳಿ ಪ್ರಕರಣದ ನಂತರದ ಬೆಳವಣಿಗೆಯೂ ಒಂದಾಗಿದೆ.
ಟಾಟಾ ಸಮೂಹದ ʼಇಂಡಿಯನ್ ಹೋಟೆಲ್ಸ್ ಕಂಪನಿ ಲಿಮಿಟೆಡ್ʼ (ಐಎಚ್ಸಿಎಲ್) ಮಾಲೀಕತ್ವದಲ್ಲಿ ಐಷಾರಾಮಿ ಹೋಟೆಲ್ಗಳ ಸರಪಣಿ ಸ್ಥಾಪಿಸಲಾಗಿದೆ. ಆ ಪೈಕಿ 1903ರಲ್ಲಿ ಸ್ಥಾಪನೆ ಆಗಿರುವ ಪ್ರಪ್ರಥಮ ಹೋಟೆಲ್ ಮುಂಬೈನ ತಾಜ್ ಮಹಲ್ ಪ್ಯಾಲೇಸ್.
2008ರ ನವೆಂಬರ್ 26ರಂದು ಮುಂಬೈನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಒಳಗಾದ ಎರಡು ಐಷಾರಾಮಿ ಹೋಟೆಲ್ಗಳ ಪೈಕಿ ಈ ತಾಜ್ ಹೋಟೆಲ್ ಕೂಡ ಒಂದಾಗಿತ್ತು. ಅಂದು ಮುಂಬೈನ ಹಲವೆಡೆ ಉಗ್ರ ದಾಳಿ ನಡೆದಿದ್ದು, ತಾಜ್ ಹೋಟೆಲನ್ನು ಭಯೋತ್ಪಾದಕರು ಬರೋಬ್ಬರಿ 60 ಗಂಟೆಗಳ ಕಾಲ ತಮ್ಮ ಹಿಡಿತದಲ್ಲಿ ಇರಿಸಿಕೊಂಡಿದ್ದರು.
ಮುಂಬೈನ ಈ ಉಗ್ರ ದಾಳಿಯಲ್ಲಿ ಒಟ್ಟು 166 ಮಂದಿ ಸಾವಿಗೀಡಾಗಿದ್ದರು. ತಾಜ್ ಹೋಟೆಲ್ ಮೇಲೆ ನಡೆದ ಈ ದಾಳಿಯಲ್ಲಿ 33 ಮಂದಿ ಸಾವಿಗೀಡಾಗಿದ್ದು, ಅದರಲ್ಲಿ ಹೋಟೆಲ್ನ 11 ಸಿಬ್ಬಂದಿಯೂ ಇದ್ದರು. ಹೋಟೆಲ್ ಮೇಲೆ ನಡೆದ ಇಂಥ ಭೀಕರ ದಾಳಿ ಸಂದರ್ಭ ರತನ್ ಟಾಟಾ ಖುದ್ದು ಹೋಟೆಲ್ ಪರಿಸರದಲ್ಲಿದ್ದು, ಅಗತ್ಯ ಕ್ರಮಗಳ ಕುರಿತು ಮಾರ್ಗದರ್ಶನ ನೀಡಿದ್ದರು. ಆಗ ಅವರಿಗೆ 70 ವರ್ಷ. ಆ ವಯಸ್ಸಿನಲ್ಲೂ ಅವರು ಮೂರು ದಿನ ಹೋಟೆಲ್ ಬಳಿಯೇ ಇದ್ದು ಮುಂದೇನಾಗಬೇಕು ಎಂಬ ಬಗ್ಗೆ ನಿರ್ದೇಶನ ನೀಡಿದ್ದರು. ಮಾತ್ರವಲ್ಲ, ಆ ಭೀಕರ ದಾಳಿ ನಡುವೆಯೂ ಹೋಟೆಲ್ ಸಿಬ್ಬಂದಿಯತ್ತ ಅವರು ತೋರಿದ ಕಾಳಜಿ ಅನನ್ಯ.
ಭಯೋತ್ಪಾದಕ ದಾಳಿಗೆ ದೊಡ್ಡಮಟ್ಟದಲ್ಲೇ ಹಾನಿಗೀಡಾದ ತಾಜ್ ಹೋಟೆಲನ್ನು ರತನ್ ಟಾಟಾ ಅವರು ಬರೀ 21 ತಿಂಗಳಲ್ಲಿ ಮತ್ತೆ ಮರುಸ್ಥಾಪಿಸಿದ್ದರು. ಅದಕ್ಕಾಗಿ ಅವರು ನೂರು ಕೋಟಿ ಡಾಲರ್ಗೂ ಹೆಚ್ಚು ಹಣ ವ್ಯಯಿಸಿದ್ದರು ಎನ್ನಲಾಗಿದೆ. ಅದರಲ್ಲೂ ಭಯೋತ್ಪಾದಕ ದಾಳಿಯಲ್ಲಿ ಸಾವಿಗೀಡಾದ ಹಾಗೂ ಗಾಯಗೊಂಡ ಹೋಟೆಲ್ ಸಿಬ್ಬಂದಿ ಮತ್ತವರ ಕುಟುಂಬಕ್ಕೆ ಅವರು ಆಸರೆಯಾಗಿ ನಿಂತಿದ್ದು ಎಲ್ಲಕ್ಕಿಂತ ವಿಶೇಷ.
ಉಗ್ರ ದಾಳಿಗೆ ಬಲಿಯಾದ ತಮ್ಮ ಹೋಟೆಲ್ನ ಅಷ್ಟೂ ಸಿಬ್ಬಂದಿಯ ಕುಟುಂಬಗಳಿಗೆ ಅವರು ಮಾಡಿದ ಸಹಾಯ ಅಪಾರ ಜನಮೆಚ್ಚುಗೆಗೆ ಪಾತ್ರವಾಗಿದೆ. ಅಂದರೆ ಸಾವಿಗೀಡಾದ ಪ್ರತಿ ಸಿಬ್ಬಂದಿ ಜೀವನಪರ್ಯಂತ ಅವರ ಹೋಟೆಲ್ನಲ್ಲಿ ದುಡಿದಿದ್ದರೆ ಎಷ್ಟು ಸಂಪಾದಿಸಿರುತ್ತಿದ್ದರೋ ಅಷ್ಟು ಹಣವನ್ನು ಅವರು ಮೃತ ಪ್ರತಿ ಸಿಬ್ಬಂದಿಯ ಕುಟುಂಬಕ್ಕೆ ನೀಡಿದ್ದರು.
ಮೃತ ಸಿಬ್ಬಂದಿಯ ಮನೆಗೆ ತೆರಳಿ ಎಲ್ಲ ಸಹಾಯದ ಭರವಸೆಯನ್ನೂ ನೀಡಿದ್ದರು. ನಂತರ ಈ ದಾಳಿಯಲ್ಲಿ ಸಂತ್ರಸ್ತರಾದವರಿಗೆ ಸಹಾಯ ಮಾಡಲೆಂದೇ ಟಾಟಾ ಸಮೂಹದ ವತಿಯಿಂದ ದ ತಾಜ್ ಪಬ್ಲಿಕ್ ಸರ್ವಿಸ್ ವೆಲ್ಫೇರ್ ಟ್ರಸ್ಟ್ (ಟಿಪಿಎಸ್ಡಬ್ಲ್ಯುಟಿ) ಕೂಡ ಸ್ಥಾಪನೆ ಮಾಡಲಾಯಿತು.
ಇದೂ ಓದಿ: ಅಂಗಡಿ-ಹೋಟೆಲ್ಗಳಲ್ಲಿ ಮಾಲೀಕರ ಹೆಸರು ಪ್ರದರ್ಶನ ಕಡ್ಡಾಯ; ಕರ್ನಾಟಕದಲ್ಲೂ ಬರಬೇಕಾ ಈ ನಿಯಮ?
ಇದೂ ಓದಿ: ಹೋಟೆಲಿಗರೇ ಹುಷಾರು: ದಸರಾ-ದೀಪಾವಳಿ ಹಿನ್ನೆಲೆಯಲ್ಲಿ ಎಫ್ಎಸ್ಎಸ್ಎಐ ಹೊರಡಿಸಿದೆ ಹೊಸ ಆದೇಶ
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ



