ಬೆಂಗಳೂರು: ಹೋಟೆಲ್ ಎನ್ನುವುದು ಎಂಥವರನ್ನೂ ಸೆಳೆಯುವಂಥ ಕ್ಷೇತ್ರ. ಬೇರೆ ಕ್ಷೇತ್ರದಲ್ಲಿ ತೊಡಗಿಸಿಕೊಂಡವರೂ ʼಹೋಟೆಲ್ ಉದ್ಯಮದಲ್ಲೂ ಒಂದು ಕೈ ನೋಡೋಣʼ ಎಂದು ಪ್ರಯತ್ನಿಸುವುದು ಕೂಡ ಸಾಮಾನ್ಯ ಎಂಬಂತಾಗಿದೆ. ಅಂಥ ಒಂದು ಪ್ರಯತ್ನವನ್ನು ಕನ್ನಡ ಸಿನಿಮಾ ನಿರ್ದೇಶಕರೊಬ್ಬರು ಕೈಗೆತ್ತಿಕೊಂಡಿದ್ದಾರೆ.
ಇತ್ತೀಚೆಗೆ ತೆರೆಕಂಡಿದ್ದ ‘ಮರ್ಯಾದೆ ಪ್ರಶ್ನೆ’ ಚಿತ್ರದ ನಿರ್ದೇಶಕ ನಾಗರಾಜ್ ಸೋಮಯಾಜಿ ಅವರು ಈ ಸಾಹಸಕ್ಕೆ ಮುಂದಾಗಿದ್ದಾರೆ. ‘ಎಸ್.ಎಲ್.ವಿ. ಸೌತ್ ಎಂಡ್’ ಎನ್ನುವ ಹೋಟೆಲ್ ಇವರ ನೇತೃತ್ವದಲ್ಲಿ ಫೆಬ್ರವರಿ 1ರಂದು ಚಾಲನೆಗೊಂಡಿದೆ.
“ಇದೊಂದು ಸಣ್ಣ ಪ್ರಯತ್ನ. ಎಲ್ಲದಕ್ಕೂ ನಿಮ್ಮೆಲ್ಲರ ಪ್ರೀತಿ ಹಾರೈಕೆ ಇದ್ದೇ ಇತ್ತು. ನನ್ನ ಅಜ್ಜಯ್ಯ ನಡೆಸುತ್ತಿದ್ದ ಈ ಹೋಟೆಲನ್ನು ನಾನು ಮತ್ತೆ ನನ್ನ ಹುಡುಗರು ಸೇರಿಕೊಂಡು ಇನ್ಮುಂದೆ ನಡೆಸೋಣ ಅಂತ. ನಿಮ್ಮೆಲ್ಲರ ಶುಭ ಹಾರೈಕೆ ಇರಲಿ. ಈ ಕಡೆ ಬಂದಾಗ ನಮ್ಮ ತಿಂಡಿಯ ರುಚಿ ನೋಡಿ, ಒಂದೊಳ್ಳೇ ಕಾಫಿ ಕುಡಿಯಿರಿ” ಎಂಬುದಾಗಿ ಹೋಟೆಲ್ ನಡೆಸುವ ತಮ್ಮ ಸಾಹಸದ ಕುರಿತು ನಿರ್ದೇಶಕ ನಾಗರಾಜ್ ಸೋಮಯಾಜಿ ಹೇಳಿಕೊಂಡಿದ್ದಾರೆ. ಅಂದಹಾಗೆ ಇದು 1995ರಲ್ಲಿ ಆರಂಭಗೊಂಡಿರುವ ಹೋಟೆಲ್.



‘ಮರ್ಯಾದೆ ಪ್ರಶ್ನೆ’ ಚಿತ್ರದ ನಿರ್ದೇಶನದ ಜೊತೆಗೆ ಅದರ ಚಿತ್ರಕಥೆ-ಸಂಭಾಷಣೆಯನ್ನೂ ನಾಗರಾಜ್ ಸೋಮಯಾಜಿ ಬರೆದಿದ್ದರು. ಆರ್‌ಜೆ ಪ್ರದೀಪ ಅವರ ಕಥೆ ಹೊಂದಿರುವ ಈ ಚಿತ್ರವನ್ನು ‘ಸಖತ್ ಸ್ಟುಡಿಯೊ’ ಬ್ಯಾನರ್‌ನಲ್ಲಿ ಶ್ವೇತಾ ಆರ್. ಪ್ರಸಾದ್ ಹಾಗೂ ವಿದ್ಯಾ ಗಾಂಧಿರಾಜನ್ ನಿರ್ಮಿಸಿದ್ದರು. ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ರಾಕೇಶ್ ಅಡಿಗ, ಶೈನ್ ಶೆಟ್ಟಿ, ಸುನೀಲ್ ರಾವ್, ಪ್ರಭು ಮುಂಡ್ಕೂರ್, ತೇಜು ಬೆಳವಾಡಿ, ಪೂರ್ಣಚಂದ್ರ ಮೈಸೂರು ಮುಂತಾದವರು ಅಭಿನಯಿಸಿದ್ದಾರೆ.


ಇದಕ್ಕೂ ಮೊದಲು ನಾಗರಾಜ್ ಸೋಮಯಾಜಿ ಅವರ ಚಿತ್ರಕಥೆ-ನಿರ್ದೇಶನದಲ್ಲಿ ‘ದಿ ಬೆಸ್ಟ್ ಆ್ಯಕ್ಟರ್’ ಎಂಬ ಚಿತ್ರವೊಂದು ಮೂಡಿಬಂದಿತ್ತು. ಇದರಲ್ಲಿ ನಟ ಸಂಚಾರಿ ವಿಜಯ್ ಪ್ರಮುಖ ಆಕರ್ಷಣೆ ಆಗಿದ್ದರು.



ವೃತ್ತಿಪರ ಫೋಟೋಗ್ರಾಫರ್ ಕೂಡ ಆಗಿರುವ ನಾಗರಾಜ್ ಸೋಮಯಾಜಿ ಅವರು ಹಲವು ಫೋಟೋಶೂಟ್‌ಗಳನ್ನು ನಡೆಸಿದ್ದಾರೆ. ‘ವಿಶ್ವ ಕುಂದಾಪ್ರ ಕನ್ನಡ ದಿನಾಚರಣೆ’ಯ ಸಂಭ್ರಮದ ಹಲವು ಕ್ಷಣಗಳು ಕೂಡ ನಾಗರಾಜ್ ಅವರ ಕ್ಯಾಮರಾದಲ್ಲಿ ಸೆರೆಯಾಗಿವೆ. ಅಲ್ಲದೆ, ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಇನ್ನಷ್ಟೇ ತೆರೆ ಕಾಣಬೇಕಿರುವ ಬಹು ನಿರೀಕ್ಷಿತ ‘ಟಾಕ್ಸಿಕ್’ ಚಿತ್ರದ ಪೋಸ್ಟರ್ ಕೂಡ ನಾಗರಾಜ್ ಅವರ ಫೋಟೋಗ್ರಫಿಯಲ್ಲಿ ಮೂಡಿಬಂದಿದೆ.
(ಚಿತ್ರಕೃಪೆ: ನಾಗರಾಜ ಸೋಮಯಾಜಿ)
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ
ಇದೂ ಓದಿ: ಹೋಟೆಲ್ ಉದ್ಯಮದಾರರ ಸಹಕಾರ ಬ್ಯಾಂಕ್ ನಿರ್ದೇಶಕರಾಗಿ 27 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಿ.ಎಸ್. ಮಂಜುನಾಥ್
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!



