ಒಳಗೇನಿದೆ!?

ಪಿಎಫ್‌ ಹಣ ಹಿಂಪಡೆಯುವುದು ಈಗ ಮತ್ತಷ್ಟು ಸುಲಭ; ಕ್ಲೇಮ್‌ ಇತ್ಯರ್ಥ ಸರಾಗ..

ನವದೆಹಲಿ: ಭವಿಷ್ಯ ನಿಧಿಯ ಮೊತ್ತ ಹಿಂಪಡೆಯಲು ಬಯಸಿ ಆನ್‌ಲೈನ್‌ನಲ್ಲಿ ಸಲ್ಲಿಸಲಾಗುವ ಅರ್ಜಿಗಳಿಗೆ ಸಂಬಂಧಿಸಿದಂತೆ ಇನ್ನು ಮುಂದೆ ಕ್ಯಾನ್ಸೆಲ್ ಚೆಕ್ ಅಪ್‌ಲೋಡ್ ಮಾಡುವುದು, ಉದ್ಯೋಗದಾತ ಕಂಪನಿಗಳ ಮೂಲಕ ಬ್ಯಾಂಕ್‌ ಖಾತೆ ಪರಿಶೀಲಿಸುವುದು ಇರುವುದಿಲ್ಲ ಎಂದು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತಿಳಿಸಿದೆ. ಇದರಿಂದ ಕ್ಲೇಮ್ ಇತ್ಯರ್ಥ ಪ್ರಕ್ರಿಯೆಗೆ ವೇಗ ಸಿಗಲಿದೆ, ಅಲ್ಲದೆ ಉದ್ಯೋಗದಾತ ಕಂಪನಿಗಳಿಗೂ ಹೊರೆ ಕಡಿಮೆ ಆಗಲಿದೆ.

ಈಗ ಆನ್‌ಲೈನ್‌ನಲ್ಲಿ ಕ್ಲೇಮ್‌ ಅರ್ಜಿ ಸಲ್ಲಿಸುವವರು ಯುಎಎನ್‌ ಜೊತೆ ಸೀಡ್ ಆದ ತಮ್ಮ ಬ್ಯಾಂಕ್ ಪಾಸ್‌ಬುಕ್‌ನ ದೃಢೀಕೃತ (ಅಟೆಸ್ಟೆಡ್) ಛಾಯಾಪ್ರತಿ ಮತ್ತು ಚೆಕ್ ಹಾಳೆಯ ಫೋಟೋ ಅಪ್‌ಲೋಡ್ ಮಾಡುವುದು ಕಡ್ಡಾಯವಿದೆ. ಅರ್ಜಿದಾರರ ಬ್ಯಾಂಕ್ ಖಾತೆಯಲ್ಲಿ ಇರುವ ವಿವರಗಳು ಸರಿ ಇವೆ ಎಂಬುದಾಗಿ ಉದ್ಯೋಗದಾತರು ದೃಢಪಡಿಸಬೇಕಾಗುತ್ತದೆ. ಈ ಪ್ರಕ್ರಿಯೆಗೆ ಈಗ ಇಪಿಎಫ್‌ಒ ತಿಲಾಂಜಲಿ ಇತ್ತಿದೆ. ಇದರಿಂದ ಕ್ಷೇಮ್ ತಿರಸ್ಕಾರದ ದೂರುಗಳು ಕಡಿಮೆ ಆಗಲಿವೆ, ಕ್ಲೇಮ್ ಇತ್ಯರ್ಥದ ಪ್ರಕ್ರಿಯೆಯೂ ಸರಾಗವಾಗಲಿದೆ ಎಂದು ಕಾರ್ಮಿಕ ಇಲಾಖೆ ಪ್ರಕಟಣೆ ತಿಳಿಸಿದೆ.

ಇದನ್ನು ಕೆವೈಸಿ ಇಂದೀಕರಣ (ಅಪ್‌ಡೇಟ್‌) ಆದ ಕೆಲವು ಸದಸ್ಯರಿಗೆ ಪ್ರಾಯೋಗಿಕವಾಗಿ 2024ರ ಮೇ 28ರಿಂದ ಜಾರಿಗೊಳಿಸಲಾಗಿತ್ತು. ಇದರಿಂದ 1.7 ಕೋಟಿ ಸದಸ್ಯರಿಗೆ ಪ್ರಯೋಜನವಾಗಿದೆ. ಪ್ರಾಯೋಗಿಕ ಉಪಕ್ರಮ ಯಶಸ್ವಿ ಆಗಿರುವುದರಿಂದ ಇದನ್ನು ಎಲ್ಲರಿಗೂ ವಿತರಿಸಲಾಗಿದೆ ಎಂದು ವಿವರಿಸಿದೆ.

ಪಿಪಿಎಫ್ ನಾಮಿನಿ ಸೇರ್ಪಡೆಗಿಲ್ಲ ಶುಲ್ಕ

ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ನಾಮನಿರ್ದೇಶಿತರ ಹೆಸರು ಸೇರ್ಪಡೆಗೆ ಅಥವಾ ಇಂದುಗೊಳಿಸುವಿಕೆಗೆ (ಅಪ್‌ಡೇಟ್) ಯಾವುದೇ ಶುಲ್ಕ ಇರುವುದಿಲ್ಲ. ಈ ಸಂಬಂಧ ಅಧಿಸೂಚನೆಗೆ ಸೂಕ್ತ ತಿದ್ದುಪಡಿ ಮಾಡಲಾಗಿದೆ ಎಂದು ಕೇಂದ್ರ ವಿತ್ತ ಸಚಿವೆ ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಸ್ಪಷ್ಟಪಡಿಸಿದ್ದಾರೆ.

ಹಣಕಾಸು ಸಂಸ್ಥೆಗಳು ಈ ಕಾರ್ಯಕ್ಕೆ 50 ರೂ. ಶುಲ್ಕ ಆಕರಿಸುತ್ತಿವೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಹಾಗಾಗಿ ಸರ್ಕಾರದ ‘ಉಳಿತಾಯ ಉತ್ತೇಜನ ಸಾಮಾನ್ಯ ನಿಯಮಾವಳಿ 2018’ಕ್ಕೆ 2025ರ ಏಪ್ರಿಲ್ 2ರಂದು ರಾಜ್ಯಪತ್ರದ ಮೂಲಕ ತಿದ್ದುಪಡಿ ಮಾಡಿ ಶುಲ್ಕ ಆಕರಿಸುವುದನ್ನು ನಿಲ್ಲಿಸಲಾಗಿದೆ ಎಂದು ಅವರು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ತಿಳಿಸಿದ್ದಾರೆ.

ಇತ್ತೀಚೆಗೆ ಸಂಸತ್‌ನಲ್ಲಿ ಅಂಗೀಕಾರ ಪಡೆದಿರುವ ಬ್ಯಾಂಕಿಂಗ್‌ ತಿದ್ದುಪಡಿ ವಿಧೇಯಕ 2025ರ ಪ್ರಕಾರ ಠೇವಣಿದಾರರ ಹಣ, ಸೇಫ್ ಕಸ್ಟಡಿ ಅಥವಾ ಲಾಕರ್‌ಗಳಲ್ಲಿ ಇಟ್ಟಿರುವ ವಸ್ತುಗಳನ್ನು ಪಡೆಯಲು ನಾಲ್ವರನ್ನು ನಾಮನಿರ್ದೇಶನ ಮಾಡುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದ್ದಾರೆ.

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಇದೂ ಓದಿ: ಸದ್ಯದಲ್ಲೇ ಎಟಿಎಂ-ಯುಪಿಐ ಮೂಲಕ ಪಿಎಫ್ ಹಣ ಹಿಂಪಡೆಯುವ ವ್ಯವಸ್ಥೆ; ಎಂದಿನಿಂದ ಜಾರಿ?

ಇದೂ ಓದಿ: ʼಹಳ್ಳಿಮನೆʼ ಸಂಜೀವ ರಾವ್‌ ಅವರಿಗೆ ʼಬಿಎಚ್‌ಎ ಜೀವಮಾನದ ಸಾಧನೆ ಪ್ರಶಸ್ತಿʼ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ