ಬೆಂಗಳೂರು: ಬೇಕರಿ-ಕಾಂಡಿಮೆಂಟ್ಸ್, ಬೀಡಾ ಅಂಗಡಿ ಹಾಗೂ ಸಣ್ಣ ಉದ್ದಿಮೆದಾರರ ಮೇಲೆ ದೌರ್ಜನ್ಯ ನಡೆಯುವುದನ್ನು ಸರ್ಕಾರ ಸಹಿಸುವುದಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಕಾರ್ಮಿಕ ಪರಿಷತ್ತಿನ ರಾಜ್ಯಾಧ್ಯಕ್ಷ ಡಾ.ರವಿ ಶೆಟ್ಟಿ ಬೈಂದೂರು ಅವರ ಸಾರಥ್ಯದಲ್ಲಿ ವಸಂತನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆದ ʼಶ್ರಮಿಕರ ಸಂವಾದ ಸಭೆʼಯಲ್ಲಿ ಕಿಕ್ಕಿರಿದು ತುಂಬಿದ್ದ ಸಂತ್ರಸ್ತರ ಜೊತೆ ಸಂವಾದ ನಡೆಸಿ ಮಾತನಾಡಿದ ಅವರು, ಶ್ರಮಿಕರ ಹಿತ ರಕ್ಷಣೆಗೆ ಸರ್ಕಾರ ಸದಾ ಬದ್ಧ. ಬೇಕರಿ-ಕಾಂಡಿಮೆಂಟ್ಸ್, ಬೀಡಾ ಅಂಗಡಿ ಹಾಗೂ ಸಣ್ಣ ಉದ್ದಿಮೆದಾರರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ ಖಂಡನೀಯ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ಸರ್ಕಾರ ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಬಿಬಿಎಂಪಿ, ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಉನ್ನತಾಧಿಕಾರಿಗಳ ಸಭೆ ಕರೆದು ಬೇಕರಿ-ಕಾಂಡಿಮೆಂಟ್ಸ್, ಬೀಡಾ ಅಂಗಡಿ ಹಾಗೂ ಸಣ್ಣ ಉದ್ದಿಮೆದಾರರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಲು ಕ್ರಮ ತೆಗೆದುಕೊಳ್ಳುತ್ತೇವೆ. ಈ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸುತ್ತೇವೆ.
| ದಿನೇಶ್ ಗುಂಡೂರಾವ್, ಸಚಿವರು.
ಇದಕ್ಕೂ ಮುನ್ನ ನಡೆದ ಸಂವಾದದಲ್ಲಿ ಸಂತ್ರಸ್ತರು ತಮ್ಮ ಸಮಸ್ಯೆಗಳನ್ನು ಸಚಿವರ ಮುಂದೆ ಎಳೆಎಳೆಯಾಗಿ ಬಿಡಿಸಿಟ್ಟರು. ಬಿಬಿಎಂಪಿ ಅಧಿಕಾರಿಗಳು ಬೇಕರಿಗಳ ಮೇಲೆ ದಾಳಿ ಮಾಡಿ 25 ಸಾವಿರ ರೂಪಾಯಿವರೆಗೆ ದಂಡ ವಿಧಿಸುತ್ತಿದ್ದಾರೆ. ಮತ್ತೊಂದೆಡೆ ಪುಡಿ ರೌಡಿಗಳ ಉಪಟಳವೂ ಹೆಚ್ಚಾಗಿದೆ. ಇನ್ನೊಂದೆಡೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ನಮ್ಮ ಮೇಲೆ ದರ್ಪ, ದೌರ್ಜನ್ಯ ತೋರುತ್ತಿದ್ದಾರೆ. ಸರ್ಕಾರ ನಮಗೆ ರಕ್ಷಣೆ ನೀಡದಿದ್ದರೆ ನಾವು ದಂಗೆ ಏಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಾನು ಕೂಡ ಹೋಟೆಲ್ ಉದ್ಯಮದಲ್ಲಿ ತೊಡಗಿಕೊಂಡು ಬೆಳೆದು ಬಂದವನು. ನನಗೆ ಈ ಉದ್ಯಮದಲ್ಲಿ 30 ವರ್ಷಗಳ ಕಹಿ ಅನುಭವವಿದೆ. ಬೇಕರಿ, ಹೋಟೆಲ್, ಬೀಡಾ ಅಂಗಡಿಗಳನ್ನು ಹೆಚ್ಚಾಗಿ ಕರಾವಳಿ ಭಾಗದವರು ನಡೆಸುತ್ತಿದ್ದಾರೆ. ಈ ಸಮಸ್ಯೆ ಬಗ್ಗೆ ಮುಂದಿನ ವಿಧಾನಮಂಡಲ ಅಧಿವೇಶದನಲ್ಲಿ ಪ್ರಸ್ತಾಪಿಸಿ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡುತ್ತೇನೆ.
| ಸುರೇಶ್ ಶೆಟ್ಟಿ ಗುರ್ಮೆ, ಶಾಸಕರು, ಕಾಪು ವಿಧಾನಸಭಾ ಕ್ಷೇತ್ರ.

ಶ್ರಮಿಕರ ನೇರ ಸಂವಾದ ಕಾರ್ಯಕ್ರಮದಲ್ಲಿ ಸಂತೋಷ ಗುರೂಜಿ, ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಕುಮಾರ್ ಶೆಟ್ಟಿ, ಸಮತಾ ಸೈನಿಕದಳದ ಎನ್.ವೆಂಕಟಸ್ವಾಮಿ, ಆರ್. ರಮೇಶ್, ಚಾಲಕರ ಸಂಘಟನೆಯಿಂದ ಗಂಡಸಿ ಸದಾನಂದ ಸ್ವಾಮಿ, ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್, ಕರ್ನಾಟಕ ರಾಜ್ಯ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಜಿ.ಕೆ.ಶೆಟ್ಟಿ, ಪದಾಧಿಕಾರಿ ಮಧುಕರ್ ಶೆಟ್ಟಿ, ಕನ್ನಡ ಪರ ಹೋರಾಟಗಾರರಾದ, ನಟರಾಜ್ ಬೊಮ್ಮಸಂದ್ರ, ಮಂಚೇಗೌಡ, ಪೂಜಾಶೆಟ್ಟಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್ಗಳಲ್ಲಿದೆಯಾ ‘ಸ್ಥಳ ಮಹಿಮೆʼ?
ಇದೂ ಓದಿ: ʼಹಳ್ಳಿಮನೆʼ ಸಂಜೀವ ರಾವ್ ಅವರಿಗೆ ʼಬಿಎಚ್ಎ ಜೀವಮಾನದ ಸಾಧನೆ ಪ್ರಶಸ್ತಿʼ
ಇದೂ ಓದಿ: ಹೋಟೆಲ್ಗಳಲ್ಲಿ ನೀವು ಸೇವಿಸುವ ಪನೀರ್ ಕೃತಕವೇ?; ಏನಿದು ಕೇಂದ್ರ ಸರ್ಕಾರದ ಹೊಸ ಮಾರ್ಗಸೂಚಿ?



