ಒಳಗೇನಿದೆ!?

ಸದ್ಯದಲ್ಲೇ ಅಂಗಡಿ-ಹೋಟೆಲ್‌ ನೌಕರರಿಗೆ 10 ಗಂಟೆ ಕೆಲಸ; ಸರ್ಕಾರದಿಂದ ಇಂದು ಮಹತ್ವದ ಸಭೆ

ಬೆಂಗಳೂರು: ರಾಜ್ಯದಲ್ಲಿ ಅಂಗಡಿ-ಹೋಟೆಲುಗಳು ಸೇರಿದಂತೆ ಖಾಸಗಿ ಸಂಸ್ಥೆಗಳ ನೌಕರರ ಕೆಲಸದ ಅವಧಿಯನ್ನು ಹೆಚ್ಚಿಸಲು ಮುಂದಾಗಿರುವ ಸರ್ಕಾರ, ಆ ಕುರಿತು ಇಂದು ಮಹತ್ವದ ಸಭೆಯನ್ನು ನಡೆಸಲಿದೆ. ಮಾತ್ರವಲ್ಲ, ಆ ನಿಟ್ಟಿನಲ್ಲಿ ಸಂಬಂಧಿತ ಕಾಯ್ದೆಗೆ ತಿದ್ದುಪಡಿ ತರಲಿಕ್ಕೂ ಮುಂದಾಗಿದೆ. ಎಲ್ಲವೂ ಅಂದುಕೊಂಡಂತೆಯೇ ಆದಲ್ಲಿ ಖಾಸಗಿ ನೌಕರರ ಕೆಲಸದ ಅವಧಿ ಹೆಚ್ಚಾಗಲಿದ್ದು, ಅವರು ವಾರದ ದಿನಗಳಲ್ಲಿ ದಿನಕ್ಕೆ ಹತ್ತು ಗಂಟೆ ಕೆಲಸ ಮಾಡಬೇಕಾಗಲಿದೆ.

ರಾಜ್ಯದ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ ಮತ್ತು ಉದ್ಯೋಗ ಪರಿಸ್ಥಿತಿ ನಿಯಂತ್ರಿಸುವ “ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ- 1961’ಕ್ಕೆ ತಿದ್ದುಪಡಿ ತರಲು ಸರ್ಕಾರ ಚಿಂತನೆ ನಡೆಸಿದೆ. ಸರ್ಕಾರದ ಈ ನಿರ್ಧಾರಕ್ಕೆ ಸರ್ವಸಮ್ಮತ ಒಪ್ಪಿಗೆ ಸಿಕ್ಕಲ್ಲಿ ಕರ್ನಾಟಕ ಶಾಪ್ಸ್ ಆ್ಯಂಡ್ ಕಮರ್ಷಿಯಲ್ ಎಸ್ಟಾಬ್ಲಿಷ್‌ಮೆಂಟ್‌ ಕಾಯ್ದೆ ಅಡಿ ನೋಂದಣಿಯಾದ ಕಡೆ ಕೆಲಸಗಾರರು ಪ್ರತಿ ದಿನ ಒಂದು ತಾಸು ಹೆಚ್ಚು ಕೆಲಸ ಮಾಡಬೇಕಾಗುತ್ತದೆ. ಇದರ ಜತೆಯಲ್ಲೇ ಕರ್ನಾಟಕ ಕಾರ್ಖಾನೆಗಳ ಕಾಯ್ದೆಗೂ ತಿದ್ದುಪಡಿ ತರಲು ಸರ್ಕಾರ ಉತ್ಸುಕವಾಗಿದೆ. ಅದು ಜಾರಿಗೆ ಬಂದರೆ ಕಾರ್ಖಾನೆಗಳಲ್ಲೂ ಕಾರ್ಮಿಕರ ದುಡಿಯುವ ಅವಧಿ ಹೆಚ್ಚಾಗಲಿದೆ. ಆದರೆ ಅದಿನ್ನೂ ಮೂರ್ತರೂಪ ಪಡೆದುಕೊಂಡಿಲ್ಲ.

ಇಂಥದ್ದೊಂದು ಮಹತ್ವದ ಬದಲಾವಣೆ ನಿಟ್ಟಿನಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುವ ಮುನ್ನ ಸಂಬಂಧಿತ ಕ್ಷೇತ್ರಗಳವರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿರುವ ಸರ್ಕಾರ, ಇಂದು ಪ್ರಮುಖ ಸಭೆ ಆಯೋಜಿಸಿದೆ. ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ವಲಯದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಕ್ಕಾಗಿ ಕಾರ್ಮಿಕ ಇಲಾಖೆ ಬುಧವಾರ ಕಾರ್ಮಿಕ ಸಂಘಟನೆಗಳ ಸಭೆ ಕರೆದಿದೆ.

ಕೇಂದ್ರದಿಂದ ರಾಜ್ಯಗಳಿಗೆ ಕೋರಿಕೆ

ಕೇಂದ್ರ ಸರ್ಕಾರ ಇಂಥದ್ದೊಂದು ಬದಲಾವಣೆ ಮಾಡುವಂತೆ ರಾಜ್ಯಗಳಿಗೆ ಕೋರಿತ್ತು. ಆ ಪ್ರಕಾರ ಛತ್ತೀಸ್‌ಗಢ, ಗುಜರಾತ್, ಮಹಾರಾಷ್ಟ್ರ, ಉತ್ತರ ಪ್ರದೇಶ, ಉತ್ತರಾಖಂಡ ರಾಜ್ಯಗಳಲ್ಲಿ ತಿದ್ದುಪಡಿ ತಂದು ‘ಕೆಲಸದ ಅವಧಿ’ ಹೆಚ್ಚಳ ಮಾಡಲಾಗಿದೆ. ರಾಜ್ಯದಲ್ಲೂ ಒಂದು ವರ್ಗದಿಂದ ಈ ಪರಿಷ್ಕರಣೆಗೆ ಸರ್ಕಾರದ ಮೇಲೆ ಒತ್ತಡವಿತ್ತು.

ದಾಖಲೆ ನಿರ್ವಹಣೆ ಷರತ್ತು

ಇದೇ ಕಾಯ್ದೆ ರೂಲ್ಸ್ 24ರ ಪ್ರಕಾರ ಮಾಲಿಕನಾದವನು ತನ್ನ ಸಂಸ್ಥೆಯ ನೌಕರನ ಕಾರ್ಯನಿರ್ವಹಣೆ ಬಗ್ಗೆ ರಿಜಿಸ್ಟರ್ ನಿರ್ವಹಿಸಬೇಕು, ರಜೆ ಸೇರಿ ಇತ್ಯಾದಿ ಮಾಹಿತಿ ದಾಖಲು ಮಾಡಿಕೊಂಡಿರಬೇಕಾಗಿತ್ತು. ಆದರೆ ಇನ್ನು ಈ ನಿಯಮಕ್ಕೆ ತಿದ್ದುಪಡಿ ತಂದರೆ ಮುಂದೆ 10ಕ್ಕಿಂತ ಕಡಿಮೆ ಸಿಬ್ಬಂದಿ ಇರುವ ಅಂಗಡಿ, ವಾಣಿಜ್ಯ ಮಳಿಗೆಗಳಲ್ಲಿ ದಾಖಲೆ ನಿರ್ವಹಿಸುವ ಅಗತ್ಯವಿಲ್ಲ. ಹಾಗೆಂದು ಕೆಲಸದಿಂದ ತೆಗೆಯುವುದು ಅಥವಾ ಕನಿಷ್ಠ ವೇತನ ವಿಚಾರಕ್ಕೆ ಈ ವಿನಾಯಿತಿ ಅನ್ವಯವಾಗಲ್ಲ. 20ಕ್ಕಿಂತ ಕಡಿಮೆ ಇರುವ ಅಂಗಡಿ, ವಾಣಿಜ್ಯ ಸಂಸ್ಥೆಗಳಿಗೆ ದಾಖಲೆ ನಿರ್ವಹಣೆ ವಿನಾಯಿತಿಗೆ ಅವಕಾಶ ಮಾಡಿಕೊಡುವಂತೆ ಕೇಂದ್ರ ಸಲಹೆ ನೀಡಿತ್ತು. ಅದನ್ನು ತಮಿಳುನಾಡು, ಗುಜರಾತ್, ಛತ್ತೀಸ್‌ಗಡ, ಉತ್ತರಾಖಂಡ, ಮಹಾರಾಷ್ಟ್ರದಲ್ಲಿ ಜಾರಿ ಮಾಡಲಾಗಿದೆ. ಈ ಕ್ರಮದಿಂದ ಸಣ್ಣಪುಟ್ಟ ವ್ಯವಹಾರ ನಡೆಸುವವರ ವೆಚ್ಚದಲ್ಲಿ ಇಳಿಕೆಯಾಗಲಿದೆ ಎಂಬ ವಾದ ಸರ್ಕಾರದ್ದಾಗಿದೆ.

ಒಟಿಗೂ ಕುತ್ತು!

ಸರ್ಕಾರದ ಈ ಪ್ರಸ್ತಾವನೆ ಬಗ್ಗೆ ಕಾರ್ಮಿಕ ವಲಯದಲ್ಲಿ ಆತಂಕ ಇದೆ. ಇಷ್ಟು ದಿನ 10 ತಾಸು ಕೆಲಸ ಮಾಡಿದರೆ ಓವರ್‌ ಟೈಮ್‌ (ಒಟಿ) ಸೌಲಭ್ಯ ಸಿಗುತ್ತಿತ್ತು, ಕೆಲಸದ ಅವಧಿ ಹೆಚ್ಚಿಸುವುದರಿಂದ ಒಟಿ ಸೌಲಭ್ಯ ಕೈ ತಪ್ಪಲಿದೆ. ಒಟಿ  ಭತ್ಯೆ ಬೇಕೆಂದರೆ 12 ತಾಸು ಕೆಲಸ ಮಾಡಬೇಕಾಗುತ್ತದೆ. ಇದು ಕೆಲಸ ಮಾಡುವ ವರ್ಗವನ್ನು ದುರುಪಯೋಗಪಡಿಸಿಕೊ ಳ್ಳುವುದಕ್ಕೆ ಅವಕಾಶ ಆಗಬಹುದೆಂಬ ಅಭಿಪ್ರಾಯವಿದೆ.

ಯಾಕೀ ನಿರ್ಧಾರ?
  • ಕೆಲಸದ ಅವಧಿ ಹೆಚ್ಚಳದಿಂದ ಆರ್ಥಿಕ ಚಟುವಟಿಕೆ ಹೆಚ್ಚಾಗಿ ಒಟ್ಟಾರೆ ಬೆಳವಣಿಗೆಗೆ ಅನುಕೂಲ.
  • ಮಹಾನಗರಗಳಲ್ಲಿ ತಡರಾತ್ರಿವರೆಗೂ ಅಂಗಡಿ, ವಾಣಿಜ್ಯ ಚಟುವಟಿಕೆಗೆ ಅವಕಾಶ ನೀಡುವುದಾಗಿ ಪ್ರಕಟಿಸಿ, ಕೆಲಸದ ಅವಧಿ ಹೆಚ್ಚಿಸದೇ ಹೋದರೆ ಉದ್ದೇಶ ಈಡೇರಲ್ಲ.
  • ಬೇರೆಬೇರೆ ಮುಂದುವರಿದ ದೇಶದಲ್ಲೂ ಇಂತಹ ಬದಲಾವಣೆ ತರಲಾಗಿದೆ. ವರ್ಕ್‌ಪೋರ್ಸ್‌ನ ಸದ್ಬಳಕೆಗೆ ಇದು ಅನಿವಾರ್ಯ.
ಏನೆಲ್ಲ ಪರಿಷ್ಕರಣೆ?

ಕರ್ನಾಟಕ ಶಾಪ್ಸ್ ಆ್ಯಂಡ್ ಕಮರ್ಷಿಯಲ್ ಎಸ್ಟಾಬ್ಲಿಷ್ ಮೆಂಟ್ ಆ್ಯಕ್ಟ್-1961ನ ಸೆಕ್ಷನ್ 7 ಪರಿಷ್ಕರಿಸಲು ಸರ್ಕಾರ ಬಯಸಿದೆ. ಪ್ರಸ್ತುತ ಈ ಕಾಯ್ದೆ ಅಡಿ ನೋಂದಾಯಿಸಿಕೊಂಡ ಅಂಗಡಿ, ವಾಣಿಜ್ಯ ಸಂಸ್ಥೆಗಳ ಸಿಬ್ಬಂದಿ ದಿನವೊಂದಕ್ಕೆ 9 ತಾಸಿಗಿಂತ ಹೆಚ್ಚು ಕೆಲಸ ಮಾಡುವಂತಿಲ್ಲ, ವಾರದ ಲೆಕ್ಕವಾದರೆ 48 ಗಂಟೆಗಿಂತ ಜಾಸ್ತಿ ಮಾಡುವಂತಿಲ್ಲ. ಈ ಪರಿಷ್ಕರಣೆ ಪ್ರಸ್ತಾಪದಂತೆ ದಿನವೊಂದಕ್ಕೆ ಕೆಲಸ ಮಾಡುವ ಗರಿಷ್ಠ ಅವಧಿಯಲ್ಲಿ ಒಂಬತ್ತು ತಾಸಿನ ಬದಲು 10 ತಾಸು ಎಂದು ಬದಲಾಗುತ್ತದೆ. ಪ್ರಸ್ತುತ ಯಾವುದೇ ಒಂದು ದಿನದ ಒಟಿ ಅವಧಿ ಸೇರಿದಂತೆ 10 ಗಂಟೆ ದಾಟಬಾರದು ಎಂದಿತ್ತು, ಅದನ್ನು 12 ಗಂಟೆ ಎಂದು ತಿದ್ದುಪಡಿ ಮಾಡಲಾಗುತ್ತಿದೆ.

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಇದೂ ಓದಿ: ಬಿಎಚ್‌ಎ ಫುಡ್‌ ಅವಾರ್ಡ್ಸ್-2025‌ ಪ್ರದಾನ; ಯಾರಿಗೆ ಯಾವ ಪ್ರಶಸ್ತಿ? ಇಲ್ಲಿದೆ ವಿವರ..

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ