ಒಳಗೇನಿದೆ!?

ಆತಿಥ್ಯ ಕ್ಷೇತ್ರಕ್ಕೆ ಸುಂಕ ಸಂಕಟ; ಮರು ಪರಿಶೀಲನೆಗಾಗಿ ಸರ್ಕಾರಕ್ಕೆ “ಆಹಾರ್‌” ಮನವಿ

ಮುಂಬೈ: ಮಹಾರಾಷ್ಟ್ರದಾದ್ಯಂತ ಇತ್ತೀಚಿನ ಅಬಕಾರಿ ಸುಂಕದ ಏರಿಕೆಗೆ ಇಂಡಿಯನ್ ಹೋಟೆಲ್ ಆ್ಯಂಡ್ ರೆಸ್ಟೋರೆಂಟ್ ಅಸೋಸಿಯೇಷನ್ (AHAR-‌ ಆಹಾರ್) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಕ್ರಮವು ರಾಜ್ಯದ ಆತಿಥ್ಯ ಕ್ಷೇತ್ರವನ್ನು ಕುಂಠಿತಗೊಳಿಸಬಹುದು ಮತ್ತು ಉದ್ಯೋಗ, ಪ್ರವಾಸೋದ್ಯಮ ಹಾಗೂ ರಾಜ್ಯದ ಆದಾಯದ ಮೇಲೆ ದೊಡ್ಡ ಪರಿಣಾಮ ಬೀರಬಹುದು ಎಂದು ಎಚ್ಚರಿಸಿದೆ.

ಆತಿಥ್ಯ ಉದ್ಯಮವು ಸತತ ಆರ್ಥಿಕ ಆಘಾತಗಳಿಂದ ತತ್ತರಿಸಿದೆ. ಇತ್ತೀಚಿನ ವ್ಯಾಟ್ ತೆರಿಗೆ ಶೇ.5ರಿಂದ ಶೇ.10ಕ್ಕೆ ಏರಿಕೆ, ಪರವಾನಗಿ ಶುಲ್ಕ ಶೇ.15ರಷ್ಟು ಏರಿಕೆ ಮತ್ತು ಈಗ ಶೇ.60ರಷ್ಟು ಅಬಕಾರಿ ಸುಂಕದ ಏರಿಕೆಯು ಉದ್ಯಮ ಸಂಕಟ ಎದುರಿಸುವಂತೆ ಮಾಡಿದೆ. ಇವು ಕೋವಿಡ್ ನಂತರ ಚೇತರಿಕೆಯ ಹಾದಿಯಲ್ಲಿರುವ ಉದ್ಯಮ ಕ್ಷೇತ್ರವನ್ನು ಅಸ್ಥಿರಗೊಳಿಸಲಿವೆ ಎಂದು ಇಂಡಿಯನ್‌ ಹೋಟೆಲ್‌ ಆ್ಯಂಡ್ ರೆಸ್ಟೋರೆಂಟ್‌ ಅಸೋಸಿಯೇಷ್‌ ಅಧ್ಯಕ್ಷ ಸುಧಾಕರ್ ಶೆಟ್ಟಿ ಆತಂಕ ವ್ಯಕ್ತಪಡಿಸಿದ್ದಾರೆ.

ಮಹಾರಾಷ್ಟ್ರದಲ್ಲಿ ಪ್ರಸ್ತುತ 19 ಸಾವಿರಕ್ಕೂ ಹೆಚ್ಚು ಪರವಾನಗಿ ಪಡೆದ ಪರ್ಮಿಟ್ ರೂಮ್‌ಗಳು ಮತ್ತು ಲೌಂಜ್ ಬಾರ್‌ಗಳಿದ್ದು, ಪ್ರತಿವರ್ಷ ಸುಮಾರು ಶೇ.8ರಷ್ಟು ಹೊಸ ಸಂಸ್ಥೆಗಳು ಸೇರ್ಪಡೆ ಆಗುತ್ತಿವೆ. ಈ ಕ್ಷೇತ್ರವು ನಾಲ್ಕು ಲಕ್ಷಕ್ಕೂ ಹೆಚ್ಚು ಜನರಿಗೆ ನೇರ ಉದ್ಯೋಗ ಒದಗಿಸುತ್ತದೆ ಮತ್ತು 48 ಸಾವಿರಕ್ಕೂ ಹೆಚ್ಚು ಸಂಬಂಧಿತ ವಿತರಕರನ್ನು ಬೆಂಬಲಿಸುತ್ತದೆ. ಆಹಾರ್ ಅಂದಾಜಿನ ಪ್ರಕಾರ, ಈ ಉದ್ಯಮವು ಒಟ್ಟಾರೆ 18 ಲಕ್ಷಕ್ಕೂ ಹೆಚ್ಚು ಜನರಿಗೆ ಪರೋಕ್ಷ ಉದ್ಯೋಗ ಸೃಷ್ಟಿಸಿದೆ ಎಂದು ಅವರು ವಿವರಿಸಿದ್ದಾರೆ.

ಪರಿಸ್ಥಿತಿಯ ಗಂಭೀರತೆ ಅರಿಯಲು ಆಹಾರ್‌ ಇತ್ತೀಚೆಗೆ ಮುಂಬೈ ಮೆಟ್ರೋಪಾಲಿಟನ್ ಪ್ರದೇಶ ಮತ್ತು ಮಹಾರಾಷ್ಟ್ರದಾದ್ಯಂತ 25 ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಘಗಳೊಂದಿಗೆ ಸಭೆ ನಡೆಸಿತು. ನಾವು ಒಂದೇ ಧ್ವನಿಯಲ್ಲಿ ಮಾತನಾಡುತ್ತೇವೆ, ಸರ್ಕಾರ ತಕ್ಷಣವೇ ನಮ್ಮ ಉದ್ಯಮದ ಜೊತೆ ಸಂವಾದ ಆರಂಭಿಸಿ, ತರ್ಕಬದ್ಧ ಮತ್ತು ಎರಡೂ ಕಡೆಗೆ ಸ್ವೀಕಾರಾರ್ಹವಾದ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಇಂತಹ ಏರಿಕೆಯು ರಾಜ್ಯದ ಆದಾಯವನ್ನು ಹೆಚ್ಚಿಸುವ ಬದಲು ಗ್ರಾಹಕರು ಮತ್ತು ವ್ಯಾಪಾರಿಗಳನ್ನು ನಿಯಂತ್ರಣವಿಲ್ಲದ, ಕಾನೂನುಬಾಹಿರ ಮಾರಾಟ ಕೇಂದ್ರಗಳ ಕಡೆಗೆ ತಳ್ಳಬಹುದು. ಇವುಗಳಲ್ಲಿ ಅನೇಕವು ಪರವಾನಗಿ ಇಲ್ಲದೆ ಕಾರ್ಯನಿರ್ವಹಿಸುತ್ತವೆ, ತೆರಿಗೆ ವಂಚನೆ ಮಾಡುತ್ತವೆ ಮತ್ತು ನಕಲಿ ಮದ್ಯ ಮಾರುತ್ತವೆ. ಇದು ಸಾರ್ವಜನಿಕ ಆರೋಗ್ಯಕ್ಕೆ ಅಪಾಯಕಾರಿ ಮಾತ್ರವಲ್ಲದೆ ಕಾನೂನುಬದ್ಧ ವ್ಯಾಪಾರಗಳನ್ನು ಇದು ದುರ್ಬಲಗೊಳಿಸುತ್ತದೆ ಎಂದು ಸುಧಾಕರ್‌ ಶೆಟ್ಟಿ ಗಮನ ಸೆಳೆದಿದ್ದಾರೆ.

ತೆರಿಗೆಗಳ ಈ ಏರಿಕೆಯು ಗ್ರಾಹಕರನ್ನು ವೈನ್ ಶಾಪ್‌ಗಳಿಂದ ಮದ್ಯ ಖರೀದಿಸಿ ಸಾರ್ವಜನಿಕ ಸ್ಥಳಗಳಲ್ಲಿ ಕುಡಿಯಲು ಪ್ರೇರೇಪಿಸಬಹುದು. ಇದರಿಂದ ಸಾರ್ವಜನಿಕ ಕಿರಿಕಿರಿ ಮತ್ತು ಕಾನೂನು ಜಾರಿ ಸಮಸ್ಯೆಗಳು ಉದ್ಭವಿಸಬಹುದು ಎಂದು ಎಚ್ಚರಿಸಿರುವ ಅವರು, ತೆರಿಗೆಯ ಒಟ್ಟಾರೆ ಭಾರ ಕಡಿಮೆ ಮಾಡಲು ಕೂಡಲೇ ಶೇ.10ರಿಂದ ಶೇ.5ಕ್ಕೆ ವ್ಯಾಟ್‌ ಇಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸರ್ಕಾರ ತನ್ನ ಈ ನಿರ್ಧಾರಗಳನ್ನು ಜಾರಿಗೊಳಿಸುವ ಮೊದಲು ಸಂಘವನ್ನು ಸಂಪರ್ಕಿಸಿಲ್ಲ ಆಹಾರ್‌ ಕಾರ್ಯದರ್ಶಿ ವಿಜಯ್‌ ಶೆಟ್ಟಿ ಹೇಳಿದ್ದಾರೆ. ಆಹಾರ್ ಯಾವಾಗಲೂ ನೀತಿ ಸಮಾಲೋಚನೆಯಲ್ಲಿ ಪಾಲ್ಗೊಂಡಿದ್ದರೂ ಈ ಪ್ರಕರಣದಲ್ಲಿ ಸಂವಾದದ ಕೊರತೆ ಆತಂಕಕಾರಿ ಮತ್ತು ಇಡೀ ಉದ್ಯಮವನ್ನು ಗಾಬರಿಗೊಳಿಸಿದೆ ಎಂದು ಅವರು ಹೇಳಿದ್ದಾರೆ.

ಆತಿಥ್ಯ ವ್ಯಾಪಾರದ ಮಾಲೀಕರಲ್ಲಿ ಶೇ.70 ಮಂದಿ ಬ್ಯಾಂಕ್ ಸಾಲಗಳ ಮೇಲೆ ಅವಲಂಬಿತರಾಗಿದ್ದಾರೆ. ಶೇ.30 ಅಥವಾ ಅದಕ್ಕಿಂತ ಹೆಚ್ಚಿನ ಆದಾಯ ಕಡಿತ ಅವರ ಸಾಲ ಮರುಪಾವತಿ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಇದರಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಂದಾಯವಾಗದ ಸ್ವತ್ತುಗಳ (NPA) ಸಂಖ್ಯೆ ಹೆಚ್ಚಾಗಬಹುದು. ಇದು ಕೇವಲ ಆತಿಥ್ಯ ಸಂಕಷ್ಟವಲ್ಲ, ಇದು ಆರ್ಥಿಕ ಸ್ಥಿರತೆಗೆ ಸಮಸ್ಯೆ ಆಗಬಹುದು. ಇಂಥ ಆರ್ಥಿಕ ಪರಿಣಾಮಗಳ ದೃಷ್ಟಿಯಿಂದ ತೆರಿಗೆ ಚೌಕಟ್ಟನ್ನು ಮರುಪರಿಶೀಲಿಸಲು ಸಂಘವು ರಾಜ್ಯಕ್ಕೆ ಮನವಿ ಮಾಡಿದೆ ಎಂದು ಅವರು ವಿವರಿಸಿದ್ದಾರೆ.

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ಇದೂ ಓದಿ: ದೇವಸ್ಥಾನ ನಿರ್ಮಾಣದಿಂದ ಇಲ್ಲಿ ಶೇ.20 ಹೆಚ್ಚಾಯ್ತು ಹೋಟೆಲೋದ್ಯಮದ ವಹಿವಾಟು!

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ