ಹೋಟೆಲ್ ಕನ್ನಡ, ಬೆಂಗಳೂರು: ‘ಎವರೆಸ್ಟ್ ಫುಡ್ ಪ್ರಾಡಕ್ಟ್ಸ್’ ಕಂಪನಿಯ ಪ್ಯಾಕ್ ಮಾಡಿದ ಜೀರಿಗೆ ಪುಡಿ (Cumin Powder) ಸೇವನೆಗೆ ಯೋಗ್ಯವಾಗಿಲ್ಲ ಎಂದು ಪರೀಕ್ಷೆಗಳಿಂದ ದೃಢಪಟ್ಟಿದ್ದರಿಂದ ತಕ್ಷಣ ಅದನ್ನು ಮಾರುಕಟ್ಟೆಯಿಂದ ಹಿಂಪಡೆಯುವಂತೆ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI) ಆದೇಶಿಸಿದೆ. ನೈರ್ಮಲ್ಯದ ತೀವ್ರ ಕೊರತೆಯ ಕಾರಣಕ್ಕಾಗಿ ‘ಕ್ರಿಯೇಟಿವ್ ಬೇಕರ್ಸ್ ಆ್ಯಂಡ್ ಕನ್ಫೆಕ್ಷನರ್ಸ್’ ಕಂಪನಿಯ ಪರವಾನಗಿಯನ್ನು ಪ್ರಾಧಿಕಾರ ಇದೇ ವೇಳೆ ಅಮಾನತುಗೊಳಿಸಿದೆ.
ಗ್ರಾಹಕರ ಆರೋಗ್ಯ ರಕ್ಷಣೆ ನಿಟ್ಟಿನಲ್ಲಿ ದೇಶಾದ್ಯಂತ ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳನ್ನು ಜಾರಿಗೊಳಿಸುವುದನ್ನು ಮುಂದುವರಿಸಲಾಗಿದೆ ಎಂದು ಎಫ್‌ಎಸ್‌ಎಸ್‌ಎಐ ಭಾನುವಾರ ತನ್ನ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದೆ. “ತೀವ್ರವಾದ ನೈರ್ಮಲ್ಯ ಕೊರತೆಯಿಂದಾಗಿ ಕ್ರಿಯೇಟಿವ್ ಬೇಕರ್ಸ್ ಆ್ಯಂಡ್ ಕನ್ಫೆಕ್ಷನರ್ಸ್ ಪ್ರೈವೇಟ್ ಲಿಮಿಟೆಡ್‌ನ ಎಫ್‌ಎಸ್‌ಎಸ್‌ಎಐ ಪರವಾನಗಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ” ಎಂದು ಅದು ತಿಳಿಸಿದೆ.
ಇದೂ ಓದಿ: ಮತ್ತದೇ ಬೇಸರ.. ಮನಸು ಗಾಂಧಿಬಜಾರು.. ಮರಳೀತೇ ನಿತ್ಯೋತ್ಸವ?
ಗೋವಾದ ರಿವರ್‌ಸೈಡ್ ರೆಸಾರ್ಟ್ಸ್ ಆ್ಯಂಡ್ ಹಾಲಿಡೇ ಹೋಮ್ಸ್ ಪ್ರೈವೇಟ್ ಲಿಮಿಟೆಡ್‌ನಿಂದ ಎವರೆಸ್ಟ್ ಜೀರಿಗೆ ಪುಡಿಯ ಮಾದರಿ ಸಂಗ್ರಹಿಸಲಾಗಿತ್ತು. “ಅಜೋಕ್ಸಿಸ್ಟ್ರೋಬಿನ್ (Azoxystrobin) ಮತ್ತು ಥಿಯಾಮೆಥೋಕ್ಸಮ್ (Thiamethoxam) ಎಂಬ ಕೀಟನಾಶಕಗಳ ಅಂಶವು ನಿಗದಿತ ಗರಿಷ್ಠ ಮಿತಿಗಿಂತ ಹೆಚ್ಚಿರುವುದು ಆಹಾರ ವಿಶ್ಲೇಷಕರ ವರದಿಯಲ್ಲಿ ಕಂಡುಬಂದಿದೆ. ಹೀಗಾಗಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ-2006ರಡಿ ಈ ಮಾದರಿಯನ್ನು ‘ಅಸುರಕ್ಷಿತ’ ಎಂದು ಘೋಷಿಸಲಾಗಿದೆ” ಎಂದು ಪ್ರಾಧಿಕಾರ ಹೇಳಿದೆ.
ಇದೂ ಓದಿ: ಹೋಟೆಲಿಗರು, ಫಾರ್ಮಸಿಯವರಿಗೆ ಆರೋಗ್ಯ ಸಚಿವರಿಂದ ಮತ್ತೆ ತಾಕೀತು..
ಈ ವರದಿ ವಿರುದ್ಧ ಮೇಲ್ಮನವಿ ಸಲ್ಲಿಸಲು ಕಂಪನಿಗೆ ಅವಕಾಶ ನೀಡಲಾಗಿತ್ತು. ಆ ಬಳಿಕ ಮಾದರಿಯನ್ನು ರೆಫರಲ್ ಫುಡ್ ಲ್ಯಾಬೋರೇಟರಿಗೆ (Referral Food Laboratory) ಕಳುಹಿಸಲಾಯಿತು. ಅಲ್ಲಿಯೂ ಕೀಟನಾಶಕಗಳ ಅಂಶ ಗರಿಷ್ಠ ಮಿತಿಗಿಂತ ಹೆಚ್ಚಿರುವುದು ದೃಢಪಟ್ಟಿದ್ದರಿಂದ ಈ ಮಾದರಿ ‘ಅಸುರಕ್ಷಿತ’ ಎಂದು ಖಚಿತಪಡಿಸಲಾಗಿದೆ.
ಇದೂ ಓದಿ: ಆಹಾರ ತಯಾರಕರಿಗೆ ಎಫ್‌ಎಸ್‌ಎಸ್‌ಎಐನಿಂದ ಮತ್ತೊಂದು ಮಹತ್ವದ ಆದೇಶ
ಹೀಗಾಗಿ, ದೋಷಪೂರಿತವಾದ ಜೀರಿಗೆ ಪುಡಿಯ ಸಂಪೂರ್ಣ ಬ್ಯಾಚ್ ತಕ್ಷಣವೇ ಮಾರುಕಟ್ಟೆಯಿಂದ ಹಿಂಪಡೆಯುವಂತೆ ನಿರ್ದೇಶಿಸಲಾಗಿದೆ. ಹಿಂಪಡೆದ ಉತ್ಪನ್ನಗಳ ಪೂರ್ತಿ ದಾಖಲೆಗಳನ್ನು ನಿರ್ವಹಿಸುವಂತೆ ಮತ್ತು ಆ ಕುರಿತು ವರದಿ ಸಲ್ಲಿಸುವಂತೆ ಎವರೆಸ್ಟ್ ಫುಡ್‌ಗೆ ಸೂಚಿಸಲಾಗಿದೆ. ಇಂಥ ಘಟನೆಗಳು ಮರುಕಳಿಸದಂತೆ ತಡೆಯಲು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಮತ್ತು ಹಿಂಪಡೆಯುವ ಪ್ರಕ್ರಿಯೆ ಪೂರ್ಣಗೊಂಡ ನಂತರ ವರದಿ ಸಲ್ಲಿಸಬೇಕು ಎಂದು ನಿಯಂತ್ರಕರು ನಿರ್ದೇಶನ ನೀಡಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಆಹಾರ ಉದ್ದಿಮೆದಾರರು ಮತ್ತು ಇ-ಕಾಮರ್ಸ್ ಕಂಪನಿಗಳ ವಿರುದ್ಧ ಜಾರಿ ಕ್ರಮಗಳನ್ನು ಎಫ್‌ಎಸ್‌ಎಸ್‌ಎಐ ಚುರುಕುಗೊಳಿಸಿದೆ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಸಾರ್ವಜನಿಕರಿಗೆ ಈ ಕ್ರಮಗಳ ಬಗ್ಗೆ ನಿರಂತರವಾಗಿ ಮಾಹಿತಿ ನೀಡುತ್ತಿದೆ.
ಇದೂ ಓದಿ: ಹೋಟೆಲ್ ಎದುರು ಗಂಟೆಗಟ್ಟಲೆ ನಿಂತಿದ್ದ ಐಷಾರಾಮಿ ಕಾರಲ್ಲಿತ್ತು ಉದ್ಯಮಿಯ ಶವ!
ಇದೂ ಓದಿ: ದರದ ಕಾರಣಕ್ಕೇ ಆದರಕ್ಕೆ ಪಾತ್ರವಾಗುತ್ತಿರುವ ʼತಾಜಾ ತಿಂಡಿʼ; ಆ ರೇಟು, ಏನದರ ಸೀಕ್ರೇಟು?
ಇದೂ ಓದಿ: ಕಲಬೆರಕೆ ಪನೀರ್ ಕುರಿತು ವ್ಯಾಪಕ ದೂರು; ಕ್ರಮಕ್ಕೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಸಚಿವ ಜೋಶಿ ಪತ್ರ



