ಹೋಟೆಲ್ ಕನ್ನಡ, ಬೆಂಗಳೂರು: ಮಧ್ಯಪ್ರಾಚ್ಯದಲ್ಲಿನ ಸಮರ ಸಂಘರ್ಷದಿಂದ ಉಂಟಾಗಿರುವ ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಎದುರಾಗಿರುವ ಎಲ್ಪಿಜಿ ಸಿಲಿಂಡರ್ ಕೊರತೆ ನಿವಾರಣೆಗಾಗಿ ಬೆಂಗಳೂರು ಹೋಟೆಲುಗಳ ಸಂಘ (ಬಿಎಚ್ಎ) ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದೆ.
ರಾಜ್ಯಾದ್ಯಂತ ಎದುರಾಗಿರುವ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಕೊರತೆ ನೀಗಿಸುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕೆಂದು ಕೋರಿ ಬೆಂಗಳೂರು ಹೋಟೆಲುಗಳ ಸಂಘ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಸೋಮವಾರ ವಿಚಾರಣೆ ನಡೆಸಿದ್ದು, ಜಾಗತಿಕ ಇಂಧನ ಬಿಕ್ಕಟ್ಟಿನ ಸಂದರ್ಭದಲ್ಲಿ ಸರ್ಕಾರದ ಆಡಳಿತಾತ್ಮಕ ನಿರ್ಧಾರಗಳಲ್ಲಿ ಮಧ್ಯ ಪ್ರವೇಶಿಸುವುದಿಲ್ಲ ಎಂಬುದಾಗಿ ಹೇಳಿದೆ.
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!
ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಏಕಸದಸ್ಯ ಪೀಠವು ಬಿಎಚ್ಎ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಲು ನಿರಾಕರಿಸಿದೆ. ಅಲ್ಲದೆ ಅರ್ಜಿದಾರರು ತಮ್ಮ ಸಮಸ್ಯೆಗಳನ್ನು ಸರ್ಕಾರ ನಡೆಸುವ ಸಭೆಯಲ್ಲಿ ತಿಳಿಸಿ ಪರಿಹಾರ ಪಡೆದುಕೊಳ್ಳಬಹುದು. ಇದು ಸರ್ಕಾರದ ನಿಯಮಗಳ ಭಾಗವಾಗಿದೆ ಎಂದು ಹೇಳಿದೆ.
ಇದೂ ಓದಿ: ಎಫ್ಎಸ್ಎಸ್ಎಐ ಪ್ರಮಾಣಪತ್ರಗಳಿಗಿನ್ನು ನವೀಕರಣ ಅನಗತ್ಯ; ಒಮ್ಮೆ ಪಡೆದರೆ ಜೀವಿತಾವಧಿ ಮಾನ್ಯತೆ
ಇತರ ದೇಶಗಳಿಗೆ ಹೋಲಿಸಿದರೆ ಸರ್ಕಾರ ಉತ್ತಮವಾಗಿ ಈ ಬಿಕ್ಕಟ್ಟನ್ನು ನಿಭಾಯಿಸುತ್ತಿದೆ. ಅಲ್ಲದೆ ಯುದ್ಧ, ಸಂಕೀರ್ಣ ಅಂತಾರಾಷ್ಟ್ರೀಯ ಸಂಘರ್ಷ, ಇಂಧನ ಪೂರೈಕೆ ಸರಪಳಿಯಲ್ಲಿ ಆಗಿರುವ ವ್ಯತ್ಯಾಸ ಮತ್ತು ರಾಜತಾಂತ್ರಿಕ ಬಿಕ್ಕಟ್ಟಿನ ವಿಷಯದಲ್ಲಿ ಸರ್ಕಾರದ ನಿರ್ಧಾರಕ್ಕೆ ಪರ್ಯಾಯವಾಗಿ ನಿರ್ದೇಶನ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ದೇಶದಲ್ಲಿ ಎಲ್ಪಿಜಿ ಪೂರೈಕೆ ವ್ಯತ್ಯಯ ತಗ್ಗಿಸಲು ಎಲ್ಲ ಪ್ರಯತ್ನ ಮಾಡಲಾಗುತ್ತಿದೆ. ಕೆಲವು ಜಾಗತಿಕ ವಿದ್ಯಮಾನಗಳು ಸರ್ಕಾರದ ನಿಯಂತ್ರಣ ಮೀರಿವೆ. ಇಂಥ ಸಂದರ್ಭದಲ್ಲಿ ಸಮಸ್ಯೆ ನಿಯಂತ್ರಿಸುವ ನಿರ್ಧಾರಗಳನ್ನು ಕಾರ್ಯಾಂಗಕ್ಕೆ ಬಿಡುವುದು ಸೂಕ್ತ ಎಂದು ವಿಚಾರಣೆ ವೇಳೆ ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ತಿಳಿಸಿದರು.
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ
ಬಾಂಬೆ ಹೈಕೋರ್ಟ್ನಲ್ಲೂ ನಿರಾಕರಣೆ: ಇದೇ ರೀತಿಯ ಅರ್ಜಿಯೊಂದರಲ್ಲಿ ಮಧ್ಯಪ್ರವೇಶಿಸಲು ಬಾಂಬೆ ಹೈಕೋರ್ಟ್ ಕೂಡ ನಿರಾಕರಿಸಿದೆ ಎಂದ ಸಾಲಿಸಿಟರ್ ಜನರಲ್, ಎಲ್ಪಿಜಿ ವಿತರಣಾ ಹಂತದಲ್ಲಿ ಯಾವುದೇ ಅಕ್ರಮ ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು. ವಂಚನೆಗಳು ವರದಿಯಾದರೆ ರಾಜ್ಯ ಸರ್ಕಾರವೂ ಕ್ರಮ ಕೈಗೊಳ್ಳಬಹುದು ಎಂದೂ ತಿಳಿಸಿದರು. ಹೋಟೆಲ್ನವರಿಗೆ ಏನಾದರೂ ಶುಭ ಸುದ್ದಿ ಇದೆಯೇ ಎಂಬ ನ್ಯಾಯಪೀಠದ ಪ್ರಶ್ನೆಗೆ ಇಲ್ಲ ಎಂದು ಉತ್ತರಿಸಿದರು. ಬಿಕ್ಕಟ್ಟು ನಿರ್ವಹಣೆಗೆ ಸರ್ಕಾರ ಎಲ್ಲ ರೀತಿಯಲ್ಲಿ ಪ್ರಯತ್ನಿಸುತ್ತಿದೆ ಎಂದು ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲರು ತಿಳಿಸಿದರು.
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ರಾಜಕೀಯ ಪಕ್ಷಪಾತವಲ್ಲ: ಕೇರಳ ಮತ್ತು ತಮಿಳುನಾಡಿನಲ್ಲಿ ಪರಿಸ್ಥಿತಿ ಸ್ವಲ್ಪ ಉತ್ತಮವಾಗಿದೆ. ಕೇಂದ್ರ ನಿಗದಿಪಡಿಸಿದ ಮಾರ್ಗಸೂಚಿಯನ್ನು ರಾಜ್ಯದಲ್ಲೂ ಪಾಲಿಸಲು ಸೂಚಿಸಬೇಕು ಎಂದು ಅರ್ಜಿದಾರರ ಪರ ವಾದಿಸಿದ ವಕೀಲರು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಾಲಿಸಿಟರ್ ಜನರಲ್, ಇತರ ರಾಜ್ಯಗಳ ಉದಾಹರಣೆ ನೀಡಿ ರಾಜಕೀಯ ಪಕ್ಷಪಾತ ಎನ್ನಲಾಗದು. ಪರಿಸ್ಥಿತಿಗೆ ಅನುಗುಣವಾಗಿ ರಾಜ್ಯ ಸರ್ಕಾರಗಳ ಜೊತೆ ಕೇಂದ್ರ ಸರ್ಕಾರ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದೆ ಎಂದರು.
ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್ಎ ನೂತನ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ
ವಾರದೊಳಗೆ ನೋಂದಣಿ ಅಗತ್ಯ: ವಾಣಿಜ್ಯ ಸಿಲಿಂಡರ್ ಬಳಸುವ ಪ್ರತಿಯೊಬ್ಬರೂ ಭಾರತೀಯ ಅನಿಲ ಪ್ರಾಧಿಕಾರ(ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ-ಗೇಲ್)ದಲ್ಲಿ ಒಂದು ವಾರದೊಳಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ಕೇಂದ್ರ ಆಹಾರ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ವಾಣಿಜ್ಯ ಸಿಲಿಂಡರ್ ಸರಬರಾಜು ನೀತಿಯಡಿ ರಾಜ್ಯದಲ್ಲಿ ವಾಣಿಜ್ಯ ಬಳಕೆಗೆ ಪ್ರತಿದಿನ 16,105 ಎಲ್ಪಿಜಿ ಸಿಲಿಂಡರ್ ಪೂರೈಸಲಾಗುವುದು. ಆ ಪೈಕಿ ಹೋಟೆಲ್, ರೆಸ್ಟೋರೆಂಟ್, ಢಾಬಾ, ಕ್ಯಾಂಟೀನ್, ಆಹಾರ ಸಂಸ್ಕರಣಾ ಘಟಕ ಸೇರಿ ವಿವಿಧ ಸೇವಾ ವಲಯಗಳಿಗೆ 10 ಸಾವಿರ ಸಿಲಿಂಡರ್ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಇದೂ ಓದಿ: ಅಮೆರಿಕದ ಪಿಟ್ಸ್ಬರ್ಗ್ನಲ್ಲಿ ಕುಂದಾಪುರದವರ ʼಉಡುಪಿ ಕೆಫೆʼ; ದ ಬೆಸ್ಟ್ ಹೋಟೆಲ್ ಎಂಬ ಮೆಚ್ಚುಗೆ
ಇದೂ ಓದಿ: ಮುಟ್ಟಿನ ರಜೆಗಾಗಿ ಕೋರ್ಟ್ ಮೆಟ್ಟಿಲೇರಿದ ಹೋಟೆಲ್ ಉದ್ಯೋಗಿ: ಸರ್ಕಾರಕ್ಕೆ ನೋಟಿಸ್ ಜಾರಿ
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದಿಂದ ಸಿಎಂ ಸಿದ್ದರಾಮಯ್ಯಗೆ ಮನವಿ; ಏನಿದು ಬೇಡಿಕೆ?



