ಹೋಟೆಲ್ ಕನ್ನಡ, ಬೆಂಗಳೂರು: ಹೋಟೆಲ್‌ಗಳು, ಬೇಕರಿಗಳು ಹಾಗೂ ಸಿಹಿ ತಿಂಡಿ ಅಂಗಡಿಗಳವರಿಗೆ ಇತ್ತೀಚೆಗೆ ಒಂದು ಮಹತ್ವದ ಆದೇಶ ಹೊರಡಿಸಿರುವ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ(ಎಫ್‌ಎಸ್‌ಎಸ್‌ಎಐ) ಇದೀಗ ಇನ್ನೊಂದು ಆದೇಶ ಹೊರಡಿಸಿದೆ.
ಗ್ರಾಹಕರಿಗೆ ನೀಡುವ ಆಹಾರದ ಪೊಟ್ಟಣಗಳಿಗೆ ಮೆಟಾಲಿಕ್ ಅಥವಾ ಸ್ಟೇಪ್ಲರ್ ಪಿನ್‌ಗಳನ್ನು ಬಳಸುವುದಕ್ಕೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಎಫ್‌ಎಸ್‌ಎಸ್‌ಎಐ ಕಡ್ಡಾಯ ನಿಷೇಧ ಹೇರಿದೆ. ಆಹಾರ ಸುರಕ್ಷತೆ ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಜೂನ್ 12ರಂದು ಈ ಮಹತ್ವದ ಸಲಹಾ ಸೂಚನೆ ಹೊರಡಿಸಲಾಗಿದೆ.
ಆದೇಶದಲ್ಲಿ ಏನಿದೆ?
ಬೇಕರಿಗಳಲ್ಲಿ ಕೇಕ್‌ಗಳನ್ನು ಅಲಂಕರಿಸಲು, ಸ್ವೀಟ್ ಬಾಕ್ಸ್‌ಗಳು, ತಿಂಡಿ ಪೊಟ್ಟಣಗಳು ಹಾಗೂ ಟೇಕ್‌ಅವೇ ಫುಡ್ ಪಾರ್ಸೆಲ್‌ಗಳನ್ನು ಪ್ಯಾಕ್ ಮಾಡಲು ವ್ಯಾಪಾರಿಗಳು ವ್ಯಾಪಕವಾಗಿ ಲೋಹದ ಪಿನ್‌ಗಳು ಅಥವಾ ವೈರ್‌ಗಳನ್ನು ಬಳಸುತ್ತಿರುವುದು ಆಹಾರ ಸುರಕ್ಷತಾ ಅಧಿಕಾರಿಗಳ ಗಮನಕ್ಕೆ ಬಂದಿದೆ. ಅಂಥ ಪಿನ್‌ಗಳು ಅಜಾಗರೂಕತೆಯಿಂದ ಆಹಾರದೊಳಗೆ ಸೇರಿ, ಗ್ರಾಹಕರು ಅದನ್ನು ಸೇವಿಸಿದರೆ ಗಂಭೀರ ಆರೋಗ್ಯದ ತೊಂದರೆಗಳು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಆದೇಶದಲ್ಲಿ ಕಿವಿಮಾತು ಹೇಳಲಾಗಿದೆ.
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?
ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆ
- ಎಲ್ಲ ಆಹಾರ ಉದ್ಯಮಿಗಳು ಆಹಾರ ಪದಾರ್ಥಗಳನ್ನು ಸೀಲ್ ಮಾಡಲು ಅಥವಾ ಪ್ಯಾಕ್ ಮಾಡಲು ಇನ್ಮುಂದೆ ಯಾವುದೇ ರೀತಿಯ ಮೆಟಾಲಿಕ್ ಪಿನ್, ಸ್ಟೇಪ್ಲರ್ ಅಥವಾ ಲೋಹದ ವೈರ್ ಬಳಸುವಂತಿಲ್ಲ.
- ಒಂದು ವೇಳೆ ಈ ನಿಯಮ ಉಲ್ಲಂಘಿಸಿ ಲೋಹದ ಪಿನ್‌ಗಳನ್ನು ಬಳಸುವುದು ಕಂಡುಬಂದರೆ, ಆಹಾರ ಸುರಕ್ಷತೆ ಕಾಯ್ದೆ 2006ರಡಿ ಕಠಿಣ ಕಾನೂನು ಮತ್ತು ದಂಡನಾತ್ಮಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಫ್‌ಎಸ್‌ಎಸ್‌ಎಐ ಎಕ್ಸಿಕ್ಯೂಟಿವ್ ಡೈರೆಕ್ಟರ್ ಡಾ. ಅಮಿತ್ ಶರ್ಮಾ ಎಚ್ಚರಿಸಿದ್ದಾರೆ.
ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ದೇಶದ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಹಾರ ಸುರಕ್ಷತಾ ಕಮಿಷನರ್‌ಗಳಿಗೆ ಸೂಚನೆ ನೀಡಲಾಗಿದೆ.
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ಫುಡ್ ಪಾರ್ಸೆಲ್‌ಗೆ ಪೇಪರ್ ಬಳಸಬೇಡಿ..
ಹಲವರು ಹೋಟೆಲ್‌ಗಳಲ್ಲಿ ಅಥವಾ ರಸ್ತೆಬದಿಯ ಅಂಗಡಿಗಳಲ್ಲಿ ಬಿಸಿಬಿಸಿಯಾದ ಬಜ್ಜಿ, ಬೋಂಡಾ ಅಥವಾ ಇತರ ಕರಿದ ಪದಾರ್ಥಗಳನ್ನು ದಿನಪತ್ರಿಕೆ (ನ್ಯೂಸ್‌ಪೇಪರ್) ಮೇಲೆ ಇಟ್ಟುಕೊಂಡು ತಿನ್ನುವುದು ಅಥವಾ ಅದರಲ್ಲಿ ಕಟ್ಟಿಸಿಕೊಂಡು ಮನೆಗೆ ತರುವುದರ ಬಗ್ಗೆಯೂ ಎಫ್‌ಎಸ್‌ಎಸ್‌ಎಐ ಕೆಲವು ದಿನಗಳ ಹಿಂದೆ ಸಲಹೆ ನೀಡಿತ್ತು.
ಇದೂ ಓದಿ: ಫೀನಿಕ್ಸ್‌ನಂತೆ ಮತ್ತೆ ಎದ್ದು ನಿಂತ ‘ಶುದ್ಧ ತಿಂಡಿ’: ಸುಟ್ಟು ಹೋಗಿದ್ದ ಹೋಟೆಲ್ ಮರು ಆರಂಭ
ದಿನಪತ್ರಿಕೆಗಳನ್ನು ಮುದ್ರಿಸಲು ಬಳಸುವ ಶಾಯಿಯಲ್ಲಿ ಸೀಸ ಸೇರಿದಂತೆ ತೀವ್ರ ವಿಷಕಾರಿ ರಾಸಾಯನಿಕಗಳು ಮತ್ತು ಭಾರವಾದ ಲೋಹಗಳು ಇರುತ್ತವೆ. ಬಿಸಿಬಿಸಿಯಾದ ಅಥವಾ ಎಣ್ಣೆಯುಳ್ಳ ಕರಿದ ಪದಾರ್ಥಗಳನ್ನು ಪೇಪರ್ ಮೇಲೆ ಇಟ್ಟಾಗ, ಆ ಬಿಸಿಗೆ ಪೇಪರ್ ಮೇಲಿರುವ ಶಾಯಿ ಕರಗಿ ನೇರವಾಗಿ ಆಹಾರ ಪದಾರ್ಥಗಳ ಜೊತೆ ಸೇರಿಕೊಳ್ಳುತ್ತದೆ.
ಆ ವಿಷಕಾರಿ ಅಂಶಗಳು ನಮ್ಮ ದೇಹವನ್ನು ಸೇರಿದರೆ ಜೀರ್ಣಕ್ರಿಯೆಯ ಸಮಸ್ಯೆಗಳು, ಕಿಡ್ನಿ ತೊಂದರೆ ಹಾಗೂ ದೀರ್ಘಾವಧಿಯಲ್ಲಿ ಕ್ಯಾನ್ಸರ್‌ನಂಥ ಮಾರಕ ಕಾಯಿಲೆಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಕೆ ನೀಡಿರುವ ಎಫ್‌ಎಸ್‌ಎಸ್‌ಎಐ, ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯದ ಹಿತದೃಷ್ಟಿಯಿಂದ ಇನ್ಮುಂದೆ ದಿನಪತ್ರಿಕೆಗಳಲ್ಲಿ ಸುತ್ತಿರುವ ಆಹಾರ ಪದಾರ್ಥಗಳನ್ನು ಬಳಸಬೇಡಿ. ಆಹಾರಕ್ಕಾಗಿ ಯಾವಾಗಲೂ ಸ್ವಚ್ಛವಾದ ತಟ್ಟೆಗಳು ಅಥವಾ ಎಲೆಗಳನ್ನು ಬಳಸಿ ಎಂಬ ಸಲಹೆ ನೀಡಿದೆ.
ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ
ಇದೂ ಓದಿ: ಏನನ್ನು ತಿನ್ನಬೇಕು/ತಿನ್ನಬಾರದು ಅಂತ ಕೂಡ ತಿಳಿಸುತ್ತೆ ಈ ಎಐ!; ಏನಿದು ಬಫೆ-ಜಿಪಿಟಿ?



