ಹೋಟೆಲ್ ಕನ್ನಡ, ಬೆಂಗಳೂರು: ಆನ್‌ಲೈನ್ ಅಗ್ರಿಗೇಟರ್ ಸಂಸ್ಥೆಯಾದ ʼಸ್ವಿಗ್ಗಿʼ ಮತ್ತು ʼಜೊಮ್ಯಾಟೊʼ ನೀತಿಗಳಿಂದಾಗಿ ತೊಂದರೆಗೆ ಒಳಗಾಗಿರುವ ಹೋಟೆಲ್ ಮಾಲೀಕರು, ತಮಗಾಗುತ್ತಿರುವ ಸಮಸ್ಯೆ ನಿವಾರಣೆ ಆಗದಿದ್ದರೆ ಶೀಘ್ರದಲ್ಲೇ ಕಠಿಣ ಕ್ರಮಕೈಗೊಳ್ಳುವ ನಿರ್ಣಯಕ್ಕೆ ಬಂದಿದ್ದಾರೆ.
ಸ್ವಿಗ್ಗಿ-ಜೊಮ್ಯಾಟೊ ನೀತಿಗಳಿಂದಾಗಿ ಎದುರಾಗಿರುವ ಸಮಸ್ಯೆಗಳ ಕುರಿತು ಅವುಗಳ ಆಡಳಿತ ಮಂಡಳಿ ಹೊಟೇಲ್ ಮಾಲೀಕರ ಜೊತೆ ಚರ್ಚಿಸಿ ನ್ಯಾಯಯುತವಾಗಿ ಬಗೆಹರಿಸಬೇಕು. ಒಂದುವೇಳೆ ಸ್ವಿಗ್ಗಿ ಕಂಪನಿಯವರಿಂದ ಸೂಕ್ತ ಸ್ಪಂದನೆ ದೊರೆಯದಿದ್ದರೆ ಆಗಸ್ಟ್ 15ರ ನಂತರ ಬೆಂಗಳೂರಿನ ಹೋಟೆಲಿಗರು ಸ್ವಿಗ್ಗಿ-ಜೊಮ್ಯಾಟೊ ಜೊತೆಗಿನ ವ್ಯವಹಾರ ಸಂಪೂರ್ಣ ಬಂದ್ ಮಾಡಲಿದ್ದಾರೆ.
ಮಾತ್ರವಲ್ಲ ಬೆಂಗಳೂರಿನ ಎಲ್ಲ ಹೊಟೇಲಿಗರು ಸ್ವಿಗ್ಗಿ-ಜೊಮ್ಯಾಟೊ ಕಂಪನಿಗಳಿಂದ ಶಾಶ್ವತವಾಗಿ ಹೊರಹೋಗಲಿದ್ದಾರೆ ಎಂಬ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಸ್ವಿಗ್ಗಿ-ಜೊಮ್ಯಾಟೊಯಿಂದ ಆಗುತ್ತಿರುವ ಸಮಸ್ಯೆಗಳ ಸಂಬಂಧ ಸಮಾನಮನಸ್ಕ ಹೋಟೆಲಿಗರು ಜುಲೈ 28ರಂದು ರಾಜಾಜಿನಗರದ ಸ್ವಾತಿ ಹೋಟೆಲ್‌ನಲ್ಲಿ ನಡೆಸಿದ ಸಮಾಲೋಚನಾ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಆನ್‌ಲೈನ್ ಆಹಾರ ವಿತರಣಾ ಸಂಸ್ಥೆ ʼಸ್ವಿಗ್ಗಿ-ಜೊಮ್ಯಾಟೊʼ ವಿಧಿಸುತ್ತಿರುವ ಕಮಿಷನ್, ಡಿಸ್ಕೌಂಟ್, ಜಾಹೀರಾತು ವೆಚ್ಚ ಹಾಗೂ ಇತರ ವಿವಿಧ ಕಡಿತಗಳಿಂದ ರೆಸ್ಟೋರೆಂಟ್‌ಗಳ ಲಾಭದ ಪ್ರಮಾಣ ತೀವ್ರವಾಗಿ ಕುಸಿಯುತ್ತಿದೆ ಎಂದು ಬೆಂಗಳೂರಿನ ರೆಸ್ಟೋರೆಂಟ್ ಮಾಲೀಕರು ಈ ಸಭೆಯಲ್ಲಿ ಆರೋಪಿಸಿದ್ದಾರೆ.
ರೆಸ್ಟೋರೆಂಟ್‌ಗಳು ಆಹಾರ ತಯಾರಿಕೆಗೆ ಬೇಕಾಗುವ ಕಚ್ಚಾ ಸಾಮಗ್ರಿ, ಸಿಬ್ಬಂದಿ ವೇತನ, ಕಟ್ಟಡ ಬಾಡಿಗೆ, ವಿದ್ಯುತ್, ಗ್ಯಾಸ್, ಪರವಾನಗಿ, ಪ್ಯಾಕಿಂಗ್ ಮತ್ತು ನಿರ್ವಹಣಾ ವೆಚ್ಚಗಳನ್ನು ಭರಿಸುತ್ತಿವೆ. ಇದರ ಜೊತೆಗೆ ಆನ್‌ಲೈನ್ ಆರ್ಡರ್‌ಗಳ ಮೇಲೆ ಕಮಿಷನ್ ಹಾಗೂ ವಿವಿಧ ಶುಲ್ಕಗಳು ಕಡಿತ ಆಗುತ್ತಿರುವುದರಿಂದ ವ್ಯವಹಾರ ನಡೆಸುವುದು ಕಷ್ಟಕರವಾಗುತ್ತಿದೆ ಎಂದು ಹೋಟೆಲಿಗರು ತಮ್ಮ ಸಮಸ್ಯೆಗಳನ್ನು ಈ ಸಭೆಯಲ್ಲಿ ವಿವರಿಸಿದ್ದಾರೆ.

ಸಭೆಯಲ್ಲಿ ಪ್ರಸ್ತಾಪಿಸಿದ ಪ್ರಮುಖ ಸಂಗತಿಗಳು
ಹೆಚ್ಚಿನ ಕಮಿಷನ್: ಪ್ರತಿ ಆರ್ಡರ್ ಮೇಲಿನ ಮೂಲ ಕಮಿಷನ್‌ನಿಂದ ರೆಸ್ಟೋರೆಂಟ್‌ನ ಆದಾಯದ ಮೇಲೆ ದೊಡ್ಡ ಪರಿಣಾಮ.
ರಿಯಾಯಿತಿ ವೆಚ್ಚ: ರೆಸ್ಟೋರೆಂಟ್ ಮಾಲೀಕರ ಸ್ಪಷ್ಟ ಅನುಮತಿ ಇಲ್ಲದೆ ರಿಯಾಯಿತಿ ನೀಡಬಾರದು. ರಿಯಾಯಿತಿ ವೆಚ್ಚವನ್ನು ರೆಸ್ಟೋರೆಂಟ್ ಮೇಲೆ ಬಲವಂತವಾಗಿ ಹೇರಬಾರದು.
ಜಾಹೀರಾತು ಶುಲ್ಕ: ಹೆಚ್ಚು ಗ್ರಾಹಕರಿಗೆ ಕಾಣಿಸಿಕೊಳ್ಳಲು ರೆಸ್ಟೋರೆಂಟ್‌ಗಳು ಜಾಹೀರಾತಿಗೆ ಹಣ ಪಾವತಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜಾಹೀರಾತು ನೀಡಿದರೂ ನಿರೀಕ್ಷಿತ ಆರ್ಡರ್‌ಗಳು ಸಿಗುತ್ತವೆ ಎಂಬ ಭರವಸೆ ಇಲ್ಲ. ಹೀಗಾಗಿ ಪ್ರಮೋಷನ್ , ಕ್ಲೀಕ್ಸ್ ಎಂದು ಹೆಚ್ಚುವರಿ ಪಾವತಿ ಕಡಿತ ಮಾಡಬಾರದು.
ಪೇಮೆಂಟ್ ಗೇಟ್‌ವೇ ಮತ್ತಿತರ ಶುಲ್ಕ: ಪೇಮೆಂಟ್ ಗೇಟ್‌ವೇ ಶುಲ್ಕ, ದೂರದ ವಿತರಣಾ ಶುಲ್ಕ, ರದ್ದುಪಡಿಸಿದ ಆರ್ಡರ್‌ಗಳ ಕಡಿತ ಹಾಗೂ ಇತರ ವೆಚ್ಚಗಳ ಬಗ್ಗೆ ಸಂಪೂರ್ಣ ಪಾರದರ್ಶಕತೆ ಇರಬೇಕು.
ಜಿಎಸ್‌ಟಿ ಮತ್ತು ತೆರಿಗೆ ಕಡಿತ: ಯಾವ ಶುಲ್ಕದ ಮೇಲೆ ಎಷ್ಟು ಜಿಎಸ್‌ಟಿ ಅಥವಾ ತೆರಿಗೆ ಕಡಿತವಾಗಿದೆ ಎಂಬುದನ್ನು ಪ್ರತಿ ಸೆಟ್ಲ್‌ಮೆಂಟ್ ವರದಿಯಲ್ಲಿ ಸ್ಪಷ್ಟವಾಗಿ ತೋರಿಸಬೇಕು.
ರಿಫಂಡ್ ಮತ್ತು ರದ್ದುಪಡಿಸಿದ ಆರ್ಡರ್: ರೆಸ್ಟೋರೆಂಟ್ ಆಹಾರವನ್ನು ಸಿದ್ಧಪಡಿಸಿದ ನಂತರ ಗ್ರಾಹಕರು ಅಥವಾ ವಿತರಣಾ ಪಾಲುದಾರರಿಂದ ಆರ್ಡರ್ ರದ್ದಾದರೆ, ಅದರ ಸಂಪೂರ್ಣ ನಷ್ಟ ರೆಸ್ಟೋರೆಂಟ್ ಮೇಲೆ ಹಾಕಬಾರದು.
ಗ್ರಾಹಕರ ದೂರುಗಳ ಪರಿಶೀಲನೆ: ಗ್ರಾಹಕರು ದೂರು ನೀಡಿದ ತಕ್ಷಣ ರೆಸ್ಟೋರೆಂಟ್‌ನ ಹಣ ಕಡಿತಗೊಳಿಸಬಾರದು. ರೆಸ್ಟೋರೆಂಟ್ ಮಾಲೀಕರ ವಿವರಣೆ ಮತ್ತು ಸಾಕ್ಷ್ಯಗಳನ್ನು ಪರಿಶೀಲಿಸಿದ ನಂತರವೇ ನಿರ್ಧಾರ ಕೈಗೊಳ್ಳಬೇಕು.
ಸೆಟ್ಲ್‌ಮೆಂಟ್‌ನಲ್ಲಿ ಪಾರದರ್ಶಕತೆಯ ಕೊರತೆ: ಒಟ್ಟು ಮಾರಾಟ, ಕಮಿಷನ್, ಡಿಸ್ಕೌಂಟ್, ಜಾಹೀರಾತು, ತೆರಿಗೆ, ರಿಫಂಡ್ ಮತ್ತು ಇತರ ಕಡಿತಗಳನ್ನು ಸರಳ ಹಾಗೂ ಅರ್ಥವಾಗುವ ರೀತಿಯಲ್ಲಿ ಪ್ರತ್ಯೇಕವಾಗಿ ತೋರಿಸಬೇಕು.
ಇದೂ ಓದಿ: ಅಮೆರಿಕದ ಪಿಟ್ಸ್‌ಬರ್ಗ್‌ನಲ್ಲಿ ಕುಂದಾಪುರದವರ ʼಉಡುಪಿ ಕೆಫೆʼ; ದ ಬೆಸ್ಟ್ ಹೋಟೆಲ್ ಎಂಬ ಮೆಚ್ಚುಗೆ
ಪಿಒಸಿ ಮತ್ತು ಬೆಂಬಲದ ಸಮಸ್ಯೆ: ಪ್ರತಿ ರೆಸ್ಟೋರೆಂಟ್‌ಗೆ ಜವಾಬ್ದಾರಿಯುತ ಸಂಪರ್ಕಾಧಿಕಾರಿಯನ್ನು ನೇಮಿಸಬೇಕು. ಸಮಸ್ಯೆ ಪರಿಹಾರ ಆಗದಿದ್ದರೆ ಸಂಪರ್ಕಿಸಬೇಕಾದ ಮೇಲಧಿಕಾರಿಗಳ ವಿವರಗಳಿರುವ ಎಸ್ಕಲೇಷನ್ ಮ್ಯಾಟ್ರಿಕ್ಸ್ ನೀಡಬೇಕು.
ಏಕಪಕ್ಷೀಯ ಒಪ್ಪಂದದ ನಿಯಮಗಳು: ಸ್ವಿಗ್ಗಿ ಮತ್ತು ರೆಸ್ಟೋರೆಂಟ್ ನಡುವಿನ ಒಪ್ಪಂದ ಎರಡೂ ಪಕ್ಷಗಳ ಹಿತಾಸಕ್ತಿಗಳನ್ನು ಸಮಾನವಾಗಿ ರಕ್ಷಿಸುವಂತಿರಬೇಕು. ಹೊಸ ನಿಯಮಗಳನ್ನು ಜಾರಿಗೊಳಿಸುವ ಮೊದಲು ರೆಸ್ಟೋರೆಂಟ್ ಮಾಲೀಕರಿಗೆ ಮಾಹಿತಿ ಹಾಗೂ ಪರಿಶೀಲನೆಗೆ ಸಮಯ ನೀಡಬೇಕು.
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

₹10,000 ಮಾರಾಟವಾದರೂ ಕೈಗೆ ಬರುವ ಮೊತ್ತ ಎಷ್ಟು?
ರೆಸ್ಟೋರೆಂಟ್ ಮಾಲೀಕರು ನೀಡಿರುವ ಕೆಲವು ಸೆಟ್ಲ್‌ಮೆಂಟ್ ಉದಾಹರಣೆಗಳ ಪ್ರಕಾರ, ₹10,000 ಮೌಲ್ಯದ ಮಾರಾಟದಿಂದ ಕಮಿಷನ್, ಡಿಸ್ಕೌಂಟ್, ಜಾಹೀರಾತು, ತೆರಿಗೆ ಮತ್ತು ಇತರ ಶುಲ್ಕಗಳು ಕಡಿತವಾದ ನಂತರ ರೆಸ್ಟೋರೆಂಟ್‌ಗೆ ಸಿಗುವ ಮೊತ್ತ ಗಣನೀಯವಾಗಿ ಕಡಿಮೆಯಾಗುತ್ತಿದೆ. ಕೆಲವು ಸಂದರ್ಭಗಳಲ್ಲಿ ಒಟ್ಟು ಕಡಿತವು ಮಾರಾಟದ ದೊಡ್ಡ ಭಾಗವನ್ನು ತಲುಪುತ್ತಿದೆ ಎಂದು ಮಾಲೀಕರು ಆರೋಪಿಸಿದ್ದಾರೆ.
ಆದರೆ ಈ ಪ್ರಮಾಣವು ಪ್ರತಿ ರೆಸ್ಟೋರೆಂಟ್‌ನ ಒಪ್ಪಂದ, ಕಮಿಷನ್ ದರ, ಡಿಸ್ಕೌಂಟ್ ಯೋಜನೆ ಮತ್ತು ಜಾಹೀರಾತು ವೆಚ್ಚದ ಆಧಾರದ ಮೇಲೆ ಬದಲಾಗುತ್ತದೆ. ಆದ್ದರಿಂದ ಪ್ರತಿ ಕಡಿತಕ್ಕೂ ದಾಖಲೆ ಆಧಾರಿತ ಸ್ಪಷ್ಟ ವಿವರಣೆ ನೀಡಬೇಕೆಂದು ಮಾಲೀಕರು ಆಗ್ರಹಿಸಿದ್ದಾರೆ.
ಇದೂ ಓದಿ: ಹೋಟೆಲ್-ಪ್ರವಾಸೋದ್ಯಮ ಕ್ಷೇತ್ರದ ಗಣ್ಯರ ಜೊತೆ ಚರ್ಚಿಸಿದ ಸಿಎಂ; ಇಲ್ಲಿದೆ ಸಂಪೂರ್ಣ ವಿವರ..
ರೆಸ್ಟೋರೆಂಟ್ ಮಾಲೀಕರ ಹೇಳಿಕೆ
“ನಾವು ಹಗಲು–ರಾತ್ರಿ ಹಾಗೂ ವಾರಾಂತ್ಯ ಎನ್ನದೆ ದುಡಿದು ಆಹಾರ ಸಿದ್ಧಪಡಿಸುತ್ತೇವೆ. ಕಚ್ಚಾ ಸಾಮಗ್ರಿಯಿಂದ ಸಿಬ್ಬಂದಿ ವೇತನದವರೆಗೆ ಎಲ್ಲ ವೆಚ್ಚವನ್ನೂ ಭರಿಸುತ್ತೇವೆ. ಆದರೆ ಕಮಿಷನ್ ಮತ್ತು ವಿವಿಧ ಕಡಿತಗಳ ನಂತರ ನಮಗೆ ಉಳಿಯುವ ಲಾಭ ಅತ್ಯಂತ ಕಡಿಮೆಯಾಗುತ್ತಿದೆ. ನಮಗೆ ಆನ್‌ಲೈನ್ ವೇದಿಕೆಗಳ ಬಗ್ಗೆ ವಿರೋಧವಿಲ್ಲ. ಆದರೆ ನ್ಯಾಯಯುತ, ಪಾರದರ್ಶಕ ಮತ್ತು ಸಮಾನ ಪಾಲುದಾರಿಕೆ ಬೇಕು.”
ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ
ರೆಸ್ಟೋರೆಂಟ್‌ಗಳ ಪ್ರಮುಖ ಬೇಡಿಕೆಗಳು
- ಕಮಿಷನ್ ದರವನ್ನು ನ್ಯಾಯಯುತ ಮಟ್ಟಕ್ಕೆ ಇಳಿಸಬೇಕು.
- ಮಾಲೀಕರ ಅನುಮತಿ ಇಲ್ಲದೆ ಡಿಸ್ಕೌಂಟ್ ಅಥವಾ ಜಾಹೀರಾತು ಆರಂಭಿಸಬಾರದು.
- ಎಲ್ಲ ಕಡಿತಗಳನ್ನು ಪ್ರತ್ಯೇಕವಾಗಿ ಮತ್ತು ಸ್ಪಷ್ಟವಾಗಿ ತೋರಿಸಬೇಕು.
- ಆಹಾರ ಸಿದ್ಧವಾದ ನಂತರ ರದ್ದಾಗುವ ಆರ್ಡರ್‌ಗಳ ನಷ್ಟವನ್ನು ರೆಸ್ಟೋರೆಂಟ್ ಮೇಲೆ ಹಾಕಬಾರದು.
- ಗ್ರಾಹಕರ ದೂರುಗಳನ್ನು ಪರಿಶೀಲಿಸದೆ ಹಣ ಕಡಿತಗೊಳಿಸಬಾರದು.
- ಪ್ರತಿ ತಿಂಗಳು ಸಂಪೂರ್ಣ ಸೆಟ್ಲ್‌ಮೆಂಟ್ ವಿವರಣೆ ನೀಡಬೇಕು.
- ರೆಸ್ಟೋರೆಂಟ್‌ಗಳಿಗೆ ಸಮರ್ಪಕ ಪಿಒಸಿ ಒದಗಿಸಬೇಕು.
- ಒಪ್ಪಂದದ ನಿಯಮಗಳನ್ನು ಏಕಪಕ್ಷೀಯವಾಗಿ ಬದಲಾಯಿಸಬಾರದು.
- ಸ್ವಿಗ್ಗಿ ಮತ್ತು ರೆಸ್ಟೋರೆಂಟ್‌ಗಳ ನಡುವೆ ಸಮಾನ ಹಾಗೂ ದೀರ್ಘಕಾಲೀನ ಪಾಲುದಾರಿಕೆ ನಿರ್ಮಿಸಬೇಕು.
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ
ಸಭೆಯಲ್ಲಿ ಕೈಗೊಂಡ ನಿರ್ಣಯ
ಸಮಸ್ಯೆಗಳ ಕುರಿತು ಸ್ವಿಗ್ಗಿ ಆಡಳಿತ ಮಂಡಳಿ ಹೊಟೇಲ್ ಮಾಲೀಕರ ಬಳಿ ಬಂದು ನ್ಯಾಯಯುತ ಪರಿಹಾರ ಕಂಡುಕೊಳ್ಳಬೇಕು. ಸ್ವಿಗ್ಗಿಯವರಿಂದ ಸೂಕ್ತ ಸ್ಪಂದನೆ ದೊರೆಯದಿದ್ದರೆ ಆಗಸ್ಟ್ 15ರ ನಂತರ ಬೆಂಗಳೂರಿನ ರೆಸ್ಟೋರೆಂಟ್ ಗಳ ಸ್ವಿಗ್ಗಿ ಜೊತೆಗಿನ ವ್ಯವಹಾರ ಸಂಪೂರ್ಣ ಬಂದ್ ಮಾಡಲಾಗುವುದು. ಬೆಂಗಳೂರಿನ ಎಲ್ಲ ಹೊಟೇಲ್‌ನವರು ಸ್ವಿಗ್ಗಿಯಿಂದ ಶಾಶ್ವತವಾಗಿ ಹೊರಬರುವುದು ಅನಿವಾರ್ಯ ಆಗಿರುತ್ತದೆ.
ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?
ಈ ಸಭೆಯಲ್ಲಿ ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್, ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ, ಗೌರವ ಕಾರ್ಯದರ್ಶಿ ವೀರೇಂದ್ರ ಕಾಮತ್, ಖಜಾಂಚಿ ಸುಧಾಕರ್ ಶೆಟ್ಟಿ, ಪತ್ರಕರ್ತ ವಸಂತ್ ಗಿಳಿಯಾರ್, ಸಮಾಲೋಚನಾ ಸಭೆಯ ಆಯೋಜಕರಾದ ಅಜಿತ್ ಶೆಟ್ಟಿ ಕಿರಾಡಿ, ಹರೀಶ್ ಶೆಟ್ಟಿ ಅರೆಶಿರೂರು, ನವೀನ್ ಶೆಟ್ಟಿ ಐರ್‌ಬೈಲು ಸೇರಿದಂತೆ ನೂರಕ್ಕೂ ಅಧಿಕ ಹೋಟೆಲ್ ಉದ್ಯಮಿಗಳು ಉಪಸ್ಥಿತರಿದ್ದರು.
ಇದೂ ಓದಿ: ಅಯೋಧ್ಯೆಯಲ್ಲಿ ಅದ್ಧೂರಿಯಾಗಿ ಉದ್ಘಾಟನೆಯಾದ ಹೋಟೆಲ್ ಬೆಂಗಳೂರು ವಿಸ್ತಾ
ಇದೂ ಓದಿ: ಕುಂಭಮೇಳ: ಕನ್ನಡಿಗ ಯಾತ್ರಿಕರ ಮೆಚ್ಚುಗೆ ಗಳಿಸುತ್ತಿರುವ ಅಯೋಧ್ಯೆಯ ಉಡುಪಿ ಹೋಟೆಲ್
ಇದೂ ಓದಿ: ಹೋಟೆಲೋದ್ಯಮಿಯ ನೇತೃತ್ವದಲ್ಲಿ ಬೃಹತ್ ದೇವತಾ ಕಾರ್ಯ, ನೀಲನಕ್ಷೆ ಅನಾವರಣ



