ಬೆಂಗಳೂರು: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ʼಆಪರೇಷನ್ ಸಿಂಧೂರʼ ನಡೆಸಿದ ನಂತರ ಉಂಟಾದ ಭಾರತ-ಪಾಕ್ ಉದ್ವಿಗ್ನತೆ ಹಿನ್ನೆಲೆಯಲ್ಲಿ ಹಲವೆಡೆ ʼಮೈಸೂರ್ ಪಾಕ್ʼಗೆ ಮರು ನಾಮಕರಣ ನಡೆದಿರುವುದು ಈಗಾಗಲೇ ಬಹುತೇಕರಿಗೆ ಗೊತ್ತಿರುವ ವಿಷಯವೇ.
ಅಂದಹಾಗೆ, ಹೋಟೆಲ್‌ಗಳಲ್ಲಿನ ಈ ಹೆಸರು ಬದಲಾವಣೆ ಇದೀಗ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಕೆನಡಾದಲ್ಲೂ ಇಂಥ ಬೆಳವಣಿಗೆ ನಡೆದಿರುವುದು ಬೆಳಕಿಗೆ ಬಂದಿದೆ. ಎರಡೂ ಕಡೆಯ ಈ ಹೆಸರು ಬದಲಾವಣೆಗೆ ಎರಡು ದೇಶಗಳ ನಡುವಿನ ಸಂಘರ್ಷವೇ ಕಾರಣ ಎನ್ನುವುದು ವಿಶೇಷ.
ಭಾರತ-ಪಾಕ್ ಸಂಘರ್ಷ ಹಿನ್ನೆಲೆಯಲ್ಲಿ ʼಮೈಸೂರ್ ಪಾಕ್ʼಗೆ ರಾಜಸ್ಥಾನದ ಜೈಪುರದಲ್ಲಿ ಹಲವು ಸ್ವೀಟ್ ಅಂಗಡಿಗಳವರು ʼಮೈಸೂರು ಶ್ರೀʼ, ʼಮೈಸೂರು ಭಾರತ್ʼ ಎಂದು ಹೆಸರು ಬದಲಿಸಿದ್ದಾರೆ. ʼಮೈಸೂರ್ ಪಾಕ್ʼ ಮಾತ್ರವಲ್ಲದೆ, ʼಮೋತಿ ಪಾಕ್ʼ, ʼಗೋಂದ್ ಪಾಕ್ʼನಂತಹ ಇತರ ಸಿಹಿತಿನಿಸುಗಳ ಹೆಸರನ್ನೂ ʼಮೋತಿ ಶ್ರೀʼ, ʼಗೋಂದ್ ಶ್ರೀʼ ಎಂಬುದಾಗಿ ಬದಲಿಸಿದ್ದಾರೆ.
ಮತ್ತೊಂದೆಡೆ, ʼಮೈಸೂರ್ ಪಾಕ್ʼಗೆ ಅಸಲಿ ಹೆಸರಾದ ʼಮೈಸೂರು ಪಾಕʼವನ್ನು ಮರು ನಾಮಕರಣ ಮಾಡುವ ಬಗ್ಗೆ ಕರ್ನಾಟದ ಹೋಟೆಲ್ ವಲಯದಲ್ಲಿ ಚಿಂತನೆ ನಡೆಯುತ್ತಿದೆ.
ಹಾಗೆಯೇ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿವಿಧ ರಾಷ್ಟ್ರಗಳಿಗೆ ವಿಧಿಸಿರುವ ಟ್ಯಾರಿಫ್‌ಗಳಿಂದಾಗಿ ಅಮೆರಿಕ ಮತ್ತು ಉಳಿದ ರಾಷ್ಟ್ರಗಳ ಮಧ್ಯೆ ಟ್ಯಾರಿಫ್ ವಾರ್ ಉಂಟಾಗಿದೆ. ಇದೇ ಕಾರಣಕ್ಕೆ ಉಭಯರಾಷ್ಟ್ರಗಳ ನಡುವಿನ ಸಂಘರ್ಷ ಟ್ರೇಡ್ ವಾರ್‌ಗೂ ಕಾರಣವಾಗಿದೆ. ಇದೀಗ ಅದು ಇನ್ನೊಂದು ಹಂತಕ್ಕೆ ಹೋಗಿದ್ದು, ಕೆನಡಾದಲ್ಲಿ ಹೋಟೆಲ್‌ನಲ್ಲಿನ ಮೆನು ಬದಲಾವಣೆವರೆಗೂ ತಲುಪಿದೆ.
ಕೆನಡಾದಲ್ಲಿ ಕಾಫಿ ಶಾಪ್‌ಗಳು ಮತ್ತು ಹೋಟೆಲ್‌ಗಳು ʼಅಮೆರಿಕಾನೋ ಕಾಫಿʼಯನ್ನು ʼಕೆನಡಿಯಾನೋ ಕಾಫಿʼ ಎಂದು ಮರುನಾಮಕರಣ ಮಾಡಿವೆ. ಯು.ಎಸ್. ತೆರಿಗೆಗಳ ವಿರುದ್ಧ ಮತ್ತು ಆರ್ಥಿಕ ಆಕ್ರಮಣದ ಭಾವನೆಗೆ ಪ್ರತಿಭಟನೆಯ ರೂಪದಲ್ಲಿ ಈ ಬದಲಾವಣೆ ನಡೆದಿದೆ.
ಟೊರೊಂಟೊದಲ್ಲಿ ಈ ಬದಲಾವಣೆ ವರದಿಯಾಗಿದೆ. ಇಲ್ಲಿ ಕೆನಡಾದ ಸರಕುಗಳ ಮೇಲೆ ವಿಧಿಸಲಾದ ಶೇ.25 ತೆರಿಗೆಗಳಿಂದ ಆರ್ಥಿಕ ಪರಿಣಾಮಗಳಿಗೆ ಒಳಗಾಗಿರುವ ವ್ಯಾಪಾರಿಗಳು ಮತ್ತು ನಾಯಕರು ತಮ್ಮ ಕೋಪವನ್ನು ವ್ಯಕ್ತಪಡಿಸಲು ಈ ಕ್ರಮ ಕೈಗೊಂಡಿದ್ದಾರೆ. ಈ ಮರು ನಾಮಕರಣವು ಕೆನಡಾದಲ್ಲಿ ಅಮೆರಿಕವನ್ನು ಗುರಿಯಾಗಿಸಿ ವಿರೋಧ ಭಾವನೆಯನ್ನು ಪ್ರತಿಬಿಂಬಿಸುತ್ತಿದೆ.
ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್ ಸಾರಿಗೆ ಸಂಘಟನೆಯ ಸ್ಟೇರಿಂಗ್!
ಇದೂ ಓದಿ: ʼಹಳ್ಳಿಮನೆʼ ಸಂಜೀವ ರಾವ್ ಅವರಿಗೆ ʼಬಿಎಚ್‌ಎ ಜೀವಮಾನದ ಸಾಧನೆ ಪ್ರಶಸ್ತಿʼ
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ



