ಹೋಟೆಲ್ ಕನ್ನಡ, ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೋಟೆಲ್ ಮಾಲೀಕರ ಖಾತೆಗಳಿಗೆ ಲಕ್ಷಗಟ್ಟಲೆ ಹಣ ಜಮೆ ಆಗಿರುವ ಸಂಗತಿ ದೀಪಾವಳಿಯ ಅವಧಿಯಲ್ಲಿ ನಡೆದ ಲಕ್ಷ್ಮೀಪೂಜೆಯ ಸಂದರ್ಭದಲ್ಲೇ ಹೊರಹೊಮ್ಮಿದೆ.
ಹೋಟೆಲ್ ಮಾಲೀಕರನೇಕರ ಖಾತೆಗಳಿಗೆ ಲಕ್ಷಗಳ ಲೆಕ್ಕದಲ್ಲಿ ಹಣ ಹರಿದುಬಂದಿದ್ದು, ಹೀಗೆ ಸಂದಾಯ ಆಗಿರುವ ಒಟ್ಟು ಮೊತ್ತವೇ ಮೂರು ಕೋಟಿ ರೂಪಾಯಿಗೂ ಅಧಿಕ ಎಂಬುದಾಗಿ ತಿಳಿದುಬಂದಿದೆ.
ಅಂದಹಾಗೆ ಇದು ಹೋಟೆಲಿಗರಿಗೆ ಸಿಕ್ಕ ಬೋನಸ್ ಅಲ್ಲ, ಬದಲಿಗೆ ಇದು ಅನ್ಯಾಯವಾಗಿ ನಷ್ಟಕ್ಕೆ ಒಳಗಾಗಿದ್ದ ಹೋಟೆಲಿಗರಿಗೆ ತಮ್ಮ ಪ್ರತಿಭಟನೆಯ ಫಲವಾಗಿ ಸಿಕ್ಕ ನ್ಯಾಯ. ಅರ್ಥಾತ್ ಅವರು ಕಳೆದುಕೊಂಡಿದ್ದ ದೊಡ್ಡ ಮೊತ್ತದ ಪೈಕಿ ಒಂದಷ್ಟು ಹಣ ಅವರಿಗೆ ವಾಪಸ್ ಸಿಕ್ಕಿದೆ.
ಇದೂ ಓದಿ: ಹೋಟೆಲಿಗರ ಹಣಕಾಸು ಗುಟ್ಟು, ಸ್ವಿಗ್ಗಿ-ಜೊಮ್ಯಾಟೊ ಕೈಯೊಳಗಿನ ಜುಟ್ಟು!: ಭಾರಿ ವಂಚನೆ ಬಹಿರಂಗ
ಅಂದರೆ, ಆನ್‌ಲೈನ್ ಆಹಾರ ವಿತರಣಾ ವೇದಿಕೆಯಾದ ಸ್ವಿಗ್ಗಿ ತನ್ನ ಪಾಲುದಾರ ಹೋಟೆಲುಗಳವರ ಗಮನಕ್ಕೆ ಬರದಂತೆ ಹಲವು ಶುಲ್ಕಗಳ ರೂಪದಲ್ಲಿ ಕಡಿತ ಮಾಡಿಕೊಂಡಿದ್ದ ಹಣದ ಪೈಕಿ ಒಂದಷ್ಟು ಮೊತ್ತವನ್ನು ಆಯಾ ಹೋಟೆಲ್ ಮಾಲೀಕರ ಖಾತೆಗೆ ಹಿಂಪಾವತಿ ಮಾಡಿದೆ. ಹೀಗೆ ಹಿಂಪಾವತಿ ಆಗಿರುವ ಒಟ್ಟು ಮೊತ್ತ ಸುಮಾರು 3ರಿಂದ 4 ಕೋಟಿ ರೂಪಾಯಿಯಷ್ಟಿದೆ ಎಂದು ಹೋಟೆಲ್ ಮಾಲೀಕರೊಬ್ಬರು ಮಾಹಿತಿ ನೀಡಿದ್ದಾರೆ.
ಹೋರಾಟಕ್ಕೆ ಮಣಿದ ಸ್ವಿಗ್ಗಿ
ಸ್ವಿಗ್ಗಿಯಿಂದ ಆರ್ಥಿಕವಾಗಿ ಮುಗ್ಗಟ್ಟು ಸಂಭವಿಸುತ್ತಿದ್ದುದನ್ನು ಗಮನಿಸಿದ ಕೆಲವು ಹೋಟೆಲ್ ಮಾಲೀಕರು ಈ ಬಗ್ಗೆ ಎಚ್ಚೆತ್ತುಕೊಂಡಿದ್ದಲ್ಲದೆ ಇತರ ಹೋಟೆಲ್ ಮಾಲೀಕರಿಗೂ ಈ ವಿಷಯ ತಿಳಿಸಿದರು. ಇದರಿಂದಾಗಿ ಇತರ ಹೋಟೆಲಿಗರಿಗೂ ಅದೇ ತೆರನಾದ ಸಮಸ್ಯೆ ಆಗುತ್ತಿರುವುದು ಕಂಡುಬಂತು. ಇನ್ನು ಸುಮ್ಮನಿದ್ದರಾಗದು ಎಂದು ಅರಿತ ಕೆಲವು ಹೋಟೆಲ್ ಮಾಲೀಕರು ಉಳಿದ ಹೋಟೆಲ್ ಮಾಲೀಕರನ್ನು ಈ ವಿಚಾರವಾಗಿ ಒಂದುಗೂಡಿಸಿದರು.
ಇದೂ ಓದಿ: ಆನ್‌ಲೈನ್ ಕಂಪನಿ ವಿರುದ್ಧ ತಿರುಗಿಬಿದ್ದ ಹೋಟೆಲ್ ಮಾಲೀಕರು: ಜಂಟಿ ಹೋರಾಟಕ್ಕೆ ಕರೆ
ಹೋಟೆಲ್ ಉದ್ಯಮಿಗಳಾದ ಅಜಿತ್ ಶೆಟ್ಟಿ ಕಿರಾಡಿ, ಹರೀಶ್ ಶೆಟ್ಟಿ ಅರೆಶಿರೂರು, ನವೀನ್ ಶೆಟ್ಟಿ ಐರ್‌ಬೈಲು ಮುಂತಾದವರು ಈ ವಿಚಾರವಾಗಿ ಒಂದು ಪ್ರತ್ಯೇಕ ವಾಟ್ಸ್ಯಾಪ್ ಗ್ರೂಪ್ ಮಾಡಿ, ಸ್ವಿಗ್ಗಿಯಿಂದ ಬಾಧಿತ ಹೋಟೆಲ್ ಮಾಲೀಕರನ್ನು ಆ ಗ್ರೂಪ್‌ನಲ್ಲಿ ಒಗ್ಗೂಡಿಸಿದರು. ಬಳಿಕ ಸ್ವಿಗ್ಗಿಯಿಂದ ಆಗುತ್ತಿರುವ ಸಮಸ್ಯೆ ವಿರುದ್ಧ ದನಿ ಎತ್ತಿದ್ದಲ್ಲದೆ, ಪರಿಹಾರಕ್ಕೆ ಮುಂದಾಗದಿದ್ದರೆ ಅದನ್ನು ಬಹಿಷ್ಕರಿಸುವುದಾಗಿ ಎಚ್ಚರಿಕೆ ನೀಡಿದರು.
ಹೋಟೆಲ್ ಉದ್ಯಮಿಗಳ ಈ ಹೋರಾಟಕ್ಕೆ ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್, ಅಧ್ಯಕ್ಷ ಎಚ್.ಎಸ್. ಸುಬ್ರಹ್ಮಣ್ಯ ಹೊಳ್ಳ, ಗೌರವ ಕಾರ್ಯದರ್ಶಿ ವೀರೇಂದ್ರ ಕಾಮತ್ ಅವರು ಬೆಂಬಲ ನೀಡಿದರು. ಪರಿಣಾಮವಾಗಿ ಹೋಟೆಲ್ ಮಾಲೀಕರ ಸಮಸ್ಯೆ ಆಲಿಸಲು ಸ್ವಿಗ್ಗಿ ಸಂಸ್ಥೆಯವರು ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಿದರು.
ಇದೂ ಓದಿ: ಸ್ವಿಗ್ಗಿಗೆ ಹೋಟೆಲ್ ಉದ್ಯಮಿಗಳಿಂದ ಬಹಿಷ್ಕಾರ: ಎಲ್ಲಿ, ಏಕೆ, ಎಂದಿನಿಂದ? ಇಲ್ಲಿದೆ ವಿವರ…
ಇಷ್ಟೆಲ್ಲ ಆದಮೇಲೆ ಹೋಟೆಲಿಗರ ನಿರಂತರ ಫಾಲೋವಪ್‌ನಿಂದಾಗಿ ಸ್ವಿಗ್ಗಿಯವರು ಕಡಿತ ಮಾಡಲಾದ ಹಣ ವಾಪಸ್ ನೀಡುವ ಭರವಸೆ ಕೊಟ್ಟಿದ್ದು, ಆ ಪೈಕಿ ಕೆಲ ತಿಂಗಳ ಮೊತ್ತ ಹಿಂಪಾವತಿ ಮಾಡಿದ್ದಾರೆ. ಈ ಬಗ್ಗೆ ಸ್ವಿಗ್ಗಿ ಅಧಿಕೃತವಾಗಿ ಮಾಹಿತಿ ನೀಡದಿದ್ದರೂ ಹೋಟೆಲಿಗರ ಖಾತೆಗೆ ಸೇರಬೇಕಾದ ಹಣ ಜಮೆ ಮಾಡಿದೆ ಎಂಬುದಾಗಿ ಹೋಟೆಲ್ ಮಾಲೀಕರು ಹೋಟೆಲ್ ಕನ್ನಡ.ಕಾಮ್‌ಗೆ ತಿಳಿಸಿದ್ದಾರೆ.
ಯಾವ ರೀತಿಯಲ್ಲಿ ಹಣ ಕಡಿತ?
ಹೋಟೆಲಿಗರ ಪ್ರಕಾರ, ಕಳೆದ ಅಕ್ಟೋಬರ್‌ನಿಂದ ಈಚೆಗೆ ಪಾವತಿಯಲ್ಲಿ ಒಂದೊಂದಾಗಿ ಹೊಸ ಕಡಿತಗಳು ಸೇರ್ಪಡೆ ಆಗುತ್ತ ಬಂದವು.
ಲಾಂಗ್ ಡಿಸ್ಟೆನ್ಸ್ ಫೀಸ್: ಹೋಟೆಲ್‌ನಿಂದ 2 ಕಿಲೋಮೀಟರ್‌ಗೂ ಮೀರಿದ ದೂರದ ಗ್ರಾಹಕರ ಆರ್ಡರ್‌ಗೆ ಡೆಲಿವರಿ ವೆಚ್ಚವನ್ನು ಹೋಟೆಲ್‌ನಿಂದಲೇ ಕಡಿತ ಮಾಡಲಾಗುತ್ತಿತ್ತು. ಇದಕ್ಕೆ ಹೋಟೆಲ್‌ಗಳ ಒಪ್ಪಿಗೆ ಪಡೆದಿರಲಿಲ್ಲ. “6 ಕಿ.ಮೀ. ದೂರದ ಗ್ರಾಹಕರಿಗೆ ನಮ್ಮ ಹೋಟೆಲ್‌ನ ಊಟ ಬೇಕಿದ್ದರೆ ಅದರ ಹೆಚ್ಚುವರಿ ವೆಚ್ಚ ಗ್ರಾಹಕರಿಂದ ಪಡೆಯಬೇಕು, ನಮ್ಮಿಂದಲ್ಲ” ಎಂಬುದು ಹೋಟೆಲಿಗರ ವಾದ.
ಸ್ವಿಗ್ಗಿ ಒನ್ ಶುಲ್ಕ: ತಿಂಗಳಿಗೆ ₹89–99 ಪಾವತಿಸುವ ಸದಸ್ಯ ಗ್ರಾಹಕರಿಗೆ ಉಚಿತ ಡೆಲಿವರಿ ನೀಡಲಾಗುತ್ತದೆ. ಆ ಉಚಿತ ಡೆಲಿವರಿಯ ವೆಚ್ಚವನ್ನೂ ಹೋಟೆಲ್‌ಗಳ ಪಾವತಿಯಿಂದ ಕಡಿತ ಮಾಡಲಾಗುತ್ತಿತ್ತು ಎಂಬ ಆರೋಪವಿದೆ.
ಜಾಹೀರಾತು ವೆಚ್ಚ: ಅನುಮತಿ ಇಲ್ಲದೆ ಜಾಹೀರಾತು ಶುಲ್ಕ ಕಡಿತ ಮಾಡಲಾಗುತ್ತಿತ್ತು. ಒಬ್ಬ ಮಾಲೀಕರ ಪ್ರಕಾರ, ಅವರು ₹50,000 ವರೆಗೆ ಮಾತ್ರ ಮೌಖಿಕ ಒಪ್ಪಿಗೆ ನೀಡಿದ್ದರೂ ತಿಂಗಳಿಗೆ ₹70,000–75,000 ಕಡಿತವಾಗುತ್ತಿತ್ತು. ಅಂದರೆ ಪ್ರತಿ ಔಟ್‌ಲೆಟ್‌ಗೆ ತಿಂಗಳಿಗೆ ಸುಮಾರು ₹20,000 ಹೆಚ್ಚುವರಿ ಹೋಗುತ್ತಿತ್ತು.
ಸೋಷಿಯಲ್ ಮೀಡಿಯಾ ಮಾರ್ಕೆಟಿಂಗ್: ಬ್ರ್ಯಾಂಡ್ ಆಧಾರಿತ ಸಾಮಾಜಿಕ ಜಾಲತಾಣ ಪ್ರಚಾರದ ವೆಚ್ಚವನ್ನೂ ಹೋಟೆಲ್‌ಗಳ ಹಣದಿಂದಲೇ ಭರಿಸಲಾಗುತ್ತಿತ್ತು. ವಾರಕ್ಕೆ ಪ್ರತಿ ಔಟ್‌ಲೆಟ್‌ನಿಂದ ₹1,000–2,000ರಂತೆ ಕಡಿತವಾಗುತ್ತಿತ್ತು ಎನ್ನಲಾಗಿದೆ.
ಡಿಸ್ಕೌಂಟ್ಸ್: ಪೀಕ್ ಅವರ್‌ನಲ್ಲಿ ಸಂಸ್ಥೆಯ ಪ್ರತಿನಿಧಿಗಳು ಮಧ್ಯೆ ಮಧ್ಯೆ ರಿಯಾಯಿತಿ ಘೋಷಿಸುತ್ತಿದ್ದರು. ಅದರ ಹೊರೆ ಕೂಡ ಹೋಟೆಲ್‌ಗಳ ಮೇಲೆಯೇ ಬೀಳುತ್ತಿತ್ತು.
ಟೋಯಿಂಗ್ ವ್ಯವಸ್ಥೆ: ಹೋಟೆಲ್‌ಗಳ ಆಫ್‌ಲೈನ್ ದರ ಕಡಿಮೆ ಇದ್ದು, ಆನ್‌ಲೈನ್ ದರದಲ್ಲಿ ಕಮಿಷನ್ ಸೇರಿಸಲಾಗಿರುತ್ತದೆ ಎಂಬುದನ್ನು ಗಮನಿಸಿ ಸ್ವಿಗ್ಗಿ ಈ ಹೊಸ ವ್ಯವಸ್ಥೆ ತಂದಿತ್ತು. ಇದರಲ್ಲಿ ಸ್ವಿಗ್ಗಿ ಮೆನು ದರದ ಮೇಲೆ ಫ್ಲ್ಯಾಟ್ 40% ಕಡಿತ ಮಾಡಿ ಹೋಟೆಲ್‌ನ ಮೂಲ ದರವನ್ನೇ ತೋರಿಸಲಾಯಿತು. ಇದಕ್ಕೆ ಹೋಟೆಲ್‌ಗಳ ಅನುಮತಿ ಇರಲಿಲ್ಲ ಎಂದು ಮಾಲೀಕರು ಹೇಳುತ್ತಾರೆ. ಇದಕ್ಕೆ ಪ್ರತ್ಯೇಕ ಪಾರ್ಟ್ನರ್ ಆ್ಯಪ್ ನೀಡಿರಲಿಲ್ಲ ಮತ್ತು ಹೋಟೆಲ್‌ಗಳೇ ಅದನ್ನು ಆಫ್ ಮಾಡಲು ಅವಕಾಶವೂ ಇರಲಿಲ್ಲ. ಸುಮಾರು ಎರಡು ತಿಂಗಳು ಈ ವ್ಯವಸ್ಥೆ ಇದ್ದು, ಒಂದು ಹೋಟೆಲ್‌ಗೆ ಅಂದಾಜು ₹2 ಲಕ್ಷ ನಷ್ಟವಾಯಿತು. ಈ ಹಣ ನಂತರ ವಾಪಸ್ ಬಂದಿದೆ. ಈಗ ಆ ವ್ಯವಸ್ಥೆ ನಿಲ್ಲಿಸಲಾಗಿದೆ.
ಇದೂ ಓದಿ: ಈ ತಿಂಗಳಾಂತ್ಯದಲ್ಲೇ ಫುಡ್ ಡೆಲಿವರಿ ಕ್ಷೇತ್ರಕ್ಕೆ ಫ್ಲಿಪ್‌ಕಾರ್ಟ್ ಲಗ್ಗೆ?: ಜೊಮ್ಯಾಟೊ-ಸ್ವಿಗ್ಗಿಗೆ ಸವಾಲು..
ಪಾವತಿ ಸಂಕೀರ್ಣ, ಗಮನಿಸದವರಿಗೆ ನಷ್ಟ
ಸ್ವಿಗ್ಗಿಯಲ್ಲಿ ಗ್ರಾಹಕರ ಹಣ ನೇರವಾಗಿ ಸಂಸ್ಥೆಗೆ ಹೋಗುತ್ತದೆ. ಭಾನುವಾರದಿಂದ ಶನಿವಾರದವರೆಗಿನ ಒಂದು ವಾರದ ವ್ಯಾಪಾರದ ಹಣವನ್ನು ಮುಂದಿನ ಬುಧವಾರ ಹೋಟೆಲ್‌ಗೆ ಪಾವತಿಸಲಾಗುತ್ತದೆ. ಇದರಿಂದ ಕೆಲವು ದಿನಗಳ ಹಣ ಸುಮಾರು 10 ದಿನ ಸಂಸ್ಥೆಯ ಬಳಿ ಇರುತ್ತದೆ. ಕಮಿಷನ್, ಅದರ ಮೇಲಿನ ಜಿಎಸ್‌ಟಿ, ಟಿಡಿಎಸ್, ಟಿಸಿಎಸ್, ಪ್ರಚಾರ ವೆಚ್ಚ ಮುಂತಾದ ಕಡಿತಗಳ ನಂತರದ ‘ನೆಟ್ ರಿಸೀವೇಬಲ್’ ಮೊತ್ತ ಮಾತ್ರ ಖಾತೆಗೆ ಬರುತ್ತದೆ.
ಪಾವತಿ ವಿವರಗಳಲ್ಲಿ ಎಲ್ಲವೂ ದಾಖಲಾಗಿದ್ದರೂ, ಅದು ಸುಲಭವಾಗಿ ಅರ್ಥವಾಗುವಂತಿರಲಿಲ್ಲ. ಲೆಕ್ಕಪತ್ರ ತಿಳಿದವರಿಗೆ ಮಾತ್ರ ಅದು ಗೊತ್ತಾಗುತ್ತದೆ ಎಂದು ಹೋಟೆಲಿಗರು ಹೇಳುತ್ತಾರೆ. ಹಲವು ಹೋಟೆಲ್ ಮಾಲೀಕರು ಕೊನೆಯ ಸಾಲಿನ ‘ನೆಟ್ ರಿಸೀವೇಬಲ್’ ಮೊತ್ತವನ್ನಷ್ಟೇ ನೋಡುತ್ತಿದ್ದರು, ಇದರ ಲಾಭ ಪಡೆದ ಸಂಸ್ಥೆ ಕಡಿತ ಹೆಚ್ಚಿಸುತ್ತ ಹೋಯಿತು ಎಂಬುದು ಅವರ ಆರೋಪ.
ಇದೂ ಓದಿ: ಫುಡ್ ಡೆಲಿವರಿ ಕುರಿತು ಬೆಂಗಳೂರು ಹೋಟೆಲುಗಳ ಸಂಘದಿಂದ ಮಹತ್ವದ ಮಾತುಕತೆ
ಅಲ್ಲದೆ, ಪಾರ್ಟ್ನರ್ ಆ್ಯಪ್‌ನಲ್ಲಿ ಯಾರು ಎಷ್ಟು ಬಾರಿ ಪಾವತಿ ವಿವರ, ಡಿಸ್ಕೌಂಟ್ ಅಥವಾ ಜಾಹೀರಾತು ಪಟ್ಟಿ ನೋಡುತ್ತಾರೆ ಎಂಬ ಮಾಹಿತಿ ಸಂಸ್ಥೆಗೆ ಬ್ಯಾಕೆಂಡ್‌ನಲ್ಲಿ ಸಿಗುತ್ತದೆ. ಹೀಗಾಗಿ ಆ ವಿವರಗಳನ್ನು ಗಮನಿಸದ ಹೋಟೆಲ್‌ಗಳ ಮೇಲೆಯೇ ಹೆಚ್ಚು ಕಡಿತ ಬೀಳುತ್ತಿತ್ತು ಎಂಬುದು ಹೋಟೆಲಿಗರ ಅನುಮಾನ.
ಜಾಹೀರಾತುಗಳಿಲ್ಲದಿದ್ದರೆ ಹೋಟೆಲ್‌ಗೆ ಆರ್ಡರ್ ಬರುವುದಿಲ್ಲ ಎಂಬ ಒತ್ತಡವೂ ಇದೆ. ಮಳೆಯಂತಹ ಸಂದರ್ಭದಲ್ಲಿ ಡೆಲಿವರಿ ಸವಾರರ ಸಂಖ್ಯೆ ಕಡಿಮೆಯಾದಾಗ, ಜಾಹೀರಾತು ನೀಡಿದ ಹೋಟೆಲ್‌ಗಳನ್ನು ಮಾತ್ರ ಆನ್‌ಲೈನ್ ಇಟ್ಟು ಉಳಿದವುಗಳನ್ನು ‘ಡೆಲಿವರಿ ಪಾರ್ಟ್ನರ್‌ಗಳಿಲ್ಲ’ ಎಂದು ತೋರಿಸಿ ಆಫ್ ಮಾಡಲಾಗುತ್ತದೆ ಎಂದು ಮಾಲೀಕರು ಆರೋಪಿಸಿದ್ದಾರೆ.
ಇದೂ ಓದಿ: ಸ್ವಿಗ್ಗಿ-ಜೊಮ್ಯಾಟೊ ಇತ್ಯಾದಿಗಳಲ್ಲಿ ಮಾಡುವ ಫುಡ್ ಆರ್ಡರ್‌ಗಳಿಂದ ಒಂದು ವರ್ಷಕ್ಕಾಗುವ ಹೆಚ್ಚುವರಿ ಖರ್ಚೆಷ್ಟು?
ದೂರು ಕೇಳದ ಸಂಪರ್ಕ ಅಧಿಕಾರಿಗಳು
ಕಡಿತದ ಬಗ್ಗೆ ಅರಿವಾದ ಕೆಲ ಮಾಲೀಕರು ಸಂಸ್ಥೆಯ ‘ಪಾಯಿಂಟ್ ಆಫ್ ಕಾಂಟ್ಯಾಕ್ಟ್’ (ಪಿಒಸಿ) ಅಧಿಕಾರಿಗಳಿಗೆ ಕರೆ ಮಾಡಿದರೂ ಅವರು ಸ್ವೀಕರಿಸುತ್ತಿರಲಿಲ್ಲ. ಇ-ಮೇಲ್ ಕಳುಹಿಸಿದರೆ 24 ಗಂಟೆಗಳ ನಂತರ “ನಿಮ್ಮ ಸಮಸ್ಯೆ ಪರಿಹರಿಸಲಾಗಿದೆ” ಎಂಬ ಸ್ವಯಂಚಾಲಿತ ಸಂದೇಶ ಬರುತ್ತಿತ್ತು ಎಂದು ಹೇಳಲಾಗಿದೆ.
ಹೋರಾಟ ಮತ್ತು ಮಾತುಕತೆ
ಹೋಟೆಲ್ ಮಾಲೀಕರು ಈ ವಿಷಯವನ್ನು ಸಭೆಗಳಲ್ಲಿ ಜೊತೆಯಾಗಿ ಚರ್ಚಿಸಿ ಹೋರಾಟಕ್ಕೆ ಮುಂದಾದರು. ಸ್ವಿಗ್ಗಿಯ ದೆಹಲಿ ಮುಖ್ಯಸ್ಥರು ಮತ್ತು ಬೆಂಗಳೂರು ನಗರ ಮುಖ್ಯಸ್ಥರು ಸೇರಿದಂತೆ ಎಂಟರಿಂದ ಹತ್ತು ಮಂದಿಯ ತಂಡ ಮಾತುಕತೆಗೆ ಬಂದಿತ್ತು. 15–20 ಮಂದಿ ಹೋಟೆಲ್ ಮಾಲೀಕರು ತಮ್ಮ ಬೇಡಿಕೆ ಮತ್ತು ಆರೋಪಗಳನ್ನು ಮಂಡಿಸಿದರು.
ಆರಂಭದಲ್ಲಿ ಒಂದು ವರ್ಷದ ಮೊತ್ತ ಮರು ಪಾವತಿಸುವುದಾಗಿ ಸಂಸ್ಥೆ ಹೇಳಿತ್ತು. ಇದು ತಮ್ಮ ಗಮನಕ್ಕೆ ಬಾರದೆ ಕೆಳಹಂತದ ಅಧಿಕಾರಿಗಳು ಮಾಡಿದ್ದು ಎಂದು ತಿಳಿಸಿ, ಪರಿಶೀಲನೆಗೆ 15 ದಿನ ಕೇಳಿತ್ತು. ಹೋಟೆಲಿಗರು 20 ದಿನ ಕಾಲಾವಕಾಶ ನೀಡಿದರು. ಆದರೆ ಒಂದು ತಿಂಗಳು ಕಳೆದು ಹೋರಾಟದ ಕಾವು ಕಡಿಮೆಯಾಯಿತು. ಆ ನಂತರ ಸಂಸ್ಥೆ ಹೋಟೆಲ್ ಮಾಲೀಕರನ್ನು ಪ್ರತ್ಯೇಕವಾಗಿ ಭೇಟಿ ಮಾಡಿ ಹಣ ಪಾವತಿಸಲು ಆರಂಭಿಸಿತು. ಹಣ ಪಡೆದವರು ಮೌನವಾದರು.
ಇದೂ ಓದಿ: ಬಿಲ್‌ನಲ್ಲಿ ಸೇವಾ ಶುಲ್ಕ ಸೇರಿಸಿದ ರೆಸ್ಟೋರೆಂಟ್‌ಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದ ಸಿಸಿಪಿಎ
ಕೊನೆಗೆ ಒಂದು ವರ್ಷದ ಬದಲು ಜನವರಿಯಿಂದ ಜೂನ್‌ವರೆಗಿನ ಆರು ತಿಂಗಳ ಮೊತ್ತ ಮಾತ್ರ ನೀಡಲು ಸಂಸ್ಥೆ ಒಪ್ಪಿತು. ಸಂಸ್ಥೆ ಕಾರ್ಪೊರೇಟ್ ಕಾರಣಗಳನ್ನು ಹೇಳಿ ಮೊತ್ತವನ್ನು ಹಂತಹಂತವಾಗಿ ಕಡಿಮೆ ಮಾಡುತ್ತ ಬಂತು ಎಂದು ಮಾಲೀಕರು ಆರೋಪಿಸಿದ್ದಾರೆ.
ಮಾತುಕತೆಗಳು ಲಿಖಿತವಾಗಿ ಸಹಿ ಮಾಡಿಸಿಕೊಳ್ಳದೆ, ವಿಡಿಯೋ ಅಥವಾ ರೆಕಾರ್ಡ್ ಇಲ್ಲದೆ ನಡೆದದ್ದು ತಮ್ಮ ಕಡೆಯ ಲೋಪ ಎಂದು ಅವರು ಒಪ್ಪಿಕೊಳ್ಳುತ್ತಾರೆ. ಒಂದು ವರ್ಷದ ಹಣ ಬಂದಿದ್ದರೆ ಕನಿಷ್ಠ 10 ಕೋಟಿ ರೂಪಾಯಿಗೂ ಅಧಿಕ ಹಣ ಬಂದಿರುತ್ತಿತ್ತು ಎಂಬುದು ಹೋಟೆಲಿಗರ ಲೆಕ್ಕಾಚಾರ.
ಪ್ರತಿರೋಧದ ಬಳಿಕ ಬದಲಾವಣೆ
ಹೋಟೆಲಿಗರ ಪ್ರತಿರೋಧದ ಬಳಿಕ ಸ್ವಿಗ್ಗಿ ಜಾಹೀರಾತು ಕಡಿತದ ವ್ಯವಸ್ಥೆಯಲ್ಲೂ ಬದಲಾವಣೆಯಾಗಿದೆ. ಈ ಹಿಂದೆ 50,000 ರೂ. ಜಾಹೀರಾತಿಗೆ 1 ಲಕ್ಷ ರೂ. ವ್ಯಾಪಾರದ ಭರವಸೆ ನೀಡಿ ಪ್ಯಾಕೇಜ್ ನೀಡಲಾಗುತ್ತಿತ್ತು. ಈಗ ಅವರು ಅದನ್ನು ಬಿಟ್ಟು, ಮಾಸಿಕ ಹತ್ತು ಲಕ್ಷ ರೂ. ವ್ಯಾಪಾರಕ್ಕೆ ಶೇ.4ರಂತೆ 40,000 ರೂ. ಪಾವತಿಸುವ ವ್ಯವಸ್ಥೆಗೆ ಬದಲಾಯಿಸಿಕೊಂಡಿದ್ದಾರೆ. ಹೀಗಾಗಿ ಈಗ ವ್ಯಾಪಾರ ಕಡಿಮೆಯಾದರೆ ಶುಲ್ಕವೂ ಕಡಿಮೆಯಾಗುವುದರಿಂದ ಸಮಸ್ಯೆ ಒಂದಷ್ಟು ಪ್ರಮಾಣದಲ್ಲಿ ತಗ್ಗಿದೆ ಎನ್ನುತ್ತಾರೆ ಹೋಟೆಲಿಗರು.
ಇದೂ ಓದಿ: ಹತ್ತು ಲಕ್ಷ ರೂ. ಮೌಲ್ಯದ ಚಿನ್ನದ ಸರ ಗ್ರಾಹಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಹೋಟೆಲ್ ಕಾರ್ಮಿಕ
ಎಚ್ಚರಿಕೆ ಮತ್ತು ಮುಂದಿನ ಹಾದಿ
ಪಾವತಿ ವಿವರಗಳನ್ನು ನಿಯಮಿತವಾಗಿ ಪರಿಶೀಲಿಸುವಂತೆ ಹೋಟೆಲ್ ಮಾಲೀಕರು ಸಹೋದ್ಯೋಗಿಗಳಿಗೆ ಸಲಹೆ ನೀಡುತ್ತಾರೆ. ಹೋರಾಟದ ನಂತರ ಹೋಟೆಲಿಗರು ಹೆಚ್ಚು ಜಾಗರೂಕರಾಗಿದ್ದು ಪಾವತಿ ಪರಿಶೀಲನೆ ಆರಂಭಿಸಿದ್ದಾರೆ. ಆದರೂ, ಸ್ವಲ್ಪ ದಿನ ಬಿಟ್ಟು ಸಂಸ್ಥೆ ಮತ್ತೆ ಕಡಿತ ಆರಂಭಿಸುವ ಸಾಧ್ಯತೆ ಇದೆ ಎಂಬ ಆತಂಕವನ್ನೂ ಅವರು ವ್ಯಕ್ತಪಡಿಸಿದ್ದಾರೆ.
ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?
ನಮ್ಮ ಮೂರು ಹೋಟೆಲ್‌ಗಳಿಗೆ ಸೇರಿ ಸುಮಾರು 12 ಲಕ್ಷ ರೂಪಾಯಿ ವಾಪಸ್ ಬಂದಿದೆ ಎಂದು ಹೋಟೆಲ್ ಮಾಲೀಕರೊಬ್ಬರು ಹೋಟೆಲ್ ಕನ್ನಡ.ಕಾಮ್‌ಗೆ ತಿಳಿಸಿದ್ದಾರೆ. ಯಾರಿಗೆ ಎಷ್ಟು ಹಣ ವಾಪಸ್ ಮಾಡಲಾಗಿದೆ ಎಂಬ ವಿಷಯ ಬಯಲಾದರೆ ಮಾರುಕಟ್ಟೆಯಲ್ಲಿ ಸಂಸ್ಥೆಗೆ ಮುಜುಗರ ಆಗುತ್ತದೆ ಎಂಬ ಕಾರಣಕ್ಕೆ ಹಿಂಪಾವತಿ ಮಾಡಲಾದ ಪಟ್ಟಿಯನ್ನು ಸ್ವಿಗ್ಗಿ ಬಹಿರಂಗ ಪಡಿಸುತ್ತಿಲ್ಲ ಎಂಬುದಾಗಿ ಹೋಟೆಲಿಗರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದೂ ಓದಿ: ಮತ್ತದೇ ಬೇಸರ.. ಮನಸು ಗಾಂಧಿಬಜಾರು.. ಮರಳೀತೇ ನಿತ್ಯೋತ್ಸವ?
ಇದೂ ಓದಿ: ಹೋಟೆಲ್ ಉದ್ಯಮಿಗಳಿಗೆ ಸ್ಪಂದಿಸಲು ಮೂರು ಸಹಾಯ ಕೇಂದ್ರ ತೆರೆದ ಸ್ವಿಗ್ಗಿ; ಇಲ್ಲಿದೆ ವಿವರ..
ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಕಚೇರಿಯಲ್ಲಿ ಸ್ವಿಗ್ಗಿ ಹೆಲ್ಪ್‌ಡೆಸ್ಕ್; ಸದ್ಬಳಕೆ ಮಾಡಿಕೊಳ್ಳುವಂತೆ ವಿನಂತಿ



