ಒಳಗೇನಿದೆ!?

ಬಿಲ್‌ನಲ್ಲಿ ಸೇವಾ ಶುಲ್ಕ ಸೇರಿಸಿದ ರೆಸ್ಟೋರೆಂಟ್‌ಗೆ 1 ಲಕ್ಷ ರೂಪಾಯಿ ದಂಡ ವಿಧಿಸಿದ ಸಿಸಿಪಿಎ

ಹೋಟೆಲ್‌ ಕನ್ನಡ, ಬೆಂಗಳೂರು: ಗ್ರಾಹಕರ ಒಪ್ಪಿಗೆ ಇಲ್ಲದೆ ಆಹಾರದ ಬಿಲ್‌ಗಳ ಮೇಲೆ ಶೇ.10ರಷ್ಟು ಸೇವಾ ಶುಲ್ಕ (Service Charge) ಕಡ್ಡಾಯವಾಗಿ ವಿಧಿಸುತ್ತಿದ್ದ ನವದೆಹಲಿಯ ಶಾಂಗ್ರಿ-ಲಾ ಇರೋಸ್ ಹೋಟೆಲ್‌ನ ‘ಮಿಸ್ಟರ್ ಚಾಯ್’ (Mister Chai) ರೆಸ್ಟೋರೆಂಟ್‌ಗೆ ಕೇಂದ್ರೀಯ ಗ್ರಾಹಕ ಸಂರಕ್ಷಣಾ ಪ್ರಾಧಿಕಾರ (CCPA) 1 ಲಕ್ಷ ರೂ. ದಂಡ ವಿಧಿಸಿದೆ.

ಇದೂ ಓದಿ: ಉಚಿತ ಅನ್ನೋದೇ ಅನುಚಿತ; ಫ್ರೀಯಾಗಿದ್ರೆ ಓದಿ, ಇದೂ ಫ್ರೀನೇ…

ಬಿಲ್‌ನಲ್ಲಿ ಸ್ವಯಂಚಾಲಿತವಾಗಿ, ಡೀಫಾಲ್ಟ್ ಆಗಿ ಅಥವಾ ಬೇರೆ ಯಾವುದೇ ಹೆಸರಿನಲ್ಲಿ ಸೇವಾ ಶುಲ್ಕ ವಿಧಿಸುವುದನ್ನು ಮತ್ತು ಸಂಗ್ರಹಿಸುವುದನ್ನು ತಕ್ಷಣವೇ ನಿಲ್ಲಿಸುವಂತೆ ರೆಸ್ಟೋರೆಂಟ್‌ಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಜತೆಗೆ, ಆದೇಶ ತಲುಪಿದ 15 ದಿನಗಳೊಳಗೆ ದಂಡ ಪಾವತಿಸಿ, ಅನುಸರಣಾ ವರದಿಯನ್ನು ಸಲ್ಲಿಸುವಂತೆ ಅಕ್ಟೋಬರ್ 22ರಂದು ಹೊರಡಿಸಿರುವ ಆದೇಶದಲ್ಲಿ ನಿರ್ದೇಶಿಸಲಾಗಿದೆ.

ಇದೂ ಓದಿ: ಮತ್ತದೇ ಬೇಸರ.. ಮನಸು ಗಾಂಧಿಬಜಾರು.. ಮರಳೀತೇ ನಿತ್ಯೋತ್ಸವ?

ಗ್ರಾಹಕರು 2025ರ ಮೇ 30 ಮತ್ತು ಜೂನ್ 10ರಂದು ನೀಡಿದ ದೂರುಗಳ ಆಧಾರದ ಮೇಲೆ ಸಿಸಿಪಿಎ ಈ ಕ್ರಮ ಕೈಗೊಂಡಿದೆ. ದೆಹಲಿ ಹೈಕೋರ್ಟ್ 2025ರ ಮಾರ್ಚ್ 28ರಂದು ನೀಡಿದ್ದ ತೀರ್ಪಿನ ಪ್ರಕಾರ, ಎಲ್ಲ ರೆಸ್ಟೋರೆಂಟ್‌ಗಳು ಸಿಸಿಪಿಎ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆದರೂ, ರೆಸ್ಟೋರೆಂಟ್ ಈ ನಿಯಮವನ್ನು ಉಲ್ಲಂಘಿಸಿತ್ತು. ಸಾಫ್ಟ್‌ವೇರ್ ಮೂಲಕ ಜನರೇಟ್ ಆಗುವ ಬಿಲ್‌ಗಳಲ್ಲಿ ಸೇವಾ ಶುಲ್ಕ ಸೇರಿಸಲಾಗಿತ್ತು. ಇದರಿಂದಾಗಿ ಗ್ರಾಹಕರು ಈ ಹೆಚ್ಚುವರಿ ಶುಲ್ಕದ ಮೇಲೂ ಜಿಎಸ್‌ಟಿ (CGST ಮತ್ತು SGST) ಕಟ್ಟುವಂತಾಗಿ, ಬಿಲ್ ಮೊತ್ತ ಅನಗತ್ಯವಾಗಿ ಹೆಚ್ಚಾಗುತ್ತಿತ್ತು.

ಇದೂ ಓದಿ: ಹೋಟೆಲಿಗರು, ಫಾರ್ಮಸಿಯವರಿಗೆ ಆರೋಗ್ಯ ಸಚಿವರಿಂದ ಮತ್ತೆ ತಾಕೀತು..

ಗ್ರಾಹಕರು ಬೇಡವೆಂದರೆ ಕೌಂಟರ್‌ನಲ್ಲಿ ಈ ಶುಲ್ಕವನ್ನು ತೆಗೆಸಲು (Waiver) ಅವಕಾಶವಿತ್ತು ಎಂದು ರೆಸ್ಟೋರೆಂಟ್ ಆಡಳಿತ ಮಂಡಳಿ ಸಮರ್ಥಿಸಿಕೊಂಡಿತ್ತು. ಆದರೆ ಈ ವಾದವನ್ನು ಸಾರಾಸಗಟಾಗಿ ತಳ್ಳಿಹಾಕಿರುವ ಸಿಸಿಪಿಎ, “ಬಿಲ್‌ನಲ್ಲಿ ಮೊದಲೇ ಶುಲ್ಕ ಸೇರಿಸಿ ನಂತರ ಅದನ್ನು ತೆಗೆಯಲು ಅವಕಾಶ ನೀಡುವುದು ಗ್ರಾಹಕರ ಮೇಲೆ ಮಾನಸಿಕ ಒತ್ತಡ ಹೇರಿದಂತಾಗುತ್ತದೆ. ಸೇವಾ ಶುಲ್ಕ ಅಥವಾ ಟಿಪ್ಸ್ ನೀಡುವುದು ಗ್ರಾಹಕರ ಆಯ್ಕೆ ಆಗಿರಬೇಕೇ ಹೊರತು ಕಡ್ಡಾಯವಲ್ಲ. ರೆಸ್ಟೋರೆಂಟ್‌ಗಳು ಶುಲ್ಕದ ಹೆಸರನ್ನು ‘ಸಿಬ್ಬಂದಿ ಕಾಣಿಕೆ’ (Voluntary Service Staff Contribution) ಎಂದು ಬದಲಾಯಿಸಿ ಸಂಗ್ರಹಿಸುವುದು ಕೂಡ ಕಾನೂನುಬಾಹಿರ” ಎಂದು ಸ್ಪಷ್ಟಪಡಿಸಿದೆ.

ಇದೂ ಓದಿ: ಸೇವಾ ಶುಲ್ಕ ವಿಧಿಸಿದ್ದ 5‌ ಹೋಟೆಲ್‌ಗಳಿಗೆ ನೋಟಿಸ್; ಸೇವಾ ಶುಲ್ಕದ ಮೊತ್ತ ಗ್ರಾಹಕರಿಗೆ ಹಿಂದಿರುಗಿಸಲು ಸೂಚನೆ

ಹೈಕೋರ್ಟ್ ತೀರ್ಪು ಮತ್ತು ಪ್ರಾಧಿಕಾರದ ಎಚ್ಚರಿಕೆಯ ನಡುವೆಯೂ ರೆಸ್ಟೋರೆಂಟ್ ಸುಮಾರು 15 ತಿಂಗಳ ಕಾಲ ಈ ಅನ್ಯಾಯದ ವ್ಯಾಪಾರ ಪದ್ಧತಿ ಮುಂದುವರಿಸಿತ್ತು. ಸಿಸಿಪಿಎ ವಿಚಾರಣೆ ಕೈಗೆತ್ತಿಕೊಂಡ ಬಳಿಕವಷ್ಟೇ, ಅಂದರೆ 2026ರ ಅಕ್ಟೋಬರ್ 1ರಿಂದ ಸೇವಾ ಶುಲ್ಕ ವಿಧಿಸುವುದನ್ನು ನಿಲ್ಲಿಸಿದೆ. ರೆಸ್ಟೋರೆಂಟ್‌ನ ಈ ನಡೆಯು ಗ್ರಾಹಕ ಸಂರಕ್ಷಣಾ ಕಾಯ್ದೆ-2019ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಪ್ರಾಧಿಕಾರ ತನ್ನ ಆದೇಶದಲ್ಲಿ ತಿಳಿಸಿದೆ.

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ಇದೂ ಓದಿ: ವಿಶ್ವ ಕುಂದಾಪ್ರ ಕನ್ನಡ ಹಬ್ಬಕ್ಕೆ ಮತ್ತೆ ʼಅರಮನೆʼಯ ರಾಜ ವೈಭೋಗ; ಕಾರಣಕರ್ತರಿವರು..

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ