ಒಳಗೇನಿದೆ!?

ಬೆಂಗಳೂರು ಹೋಟೆಲುಗಳ ಸಂಘದಿಂದ ಪ್ರಭಾಕರ್‌ ಹೆಗಡೆ ಅವರಿಗೆ ʼಉದ್ಯಮ ಚೇತನʼ ಪ್ರಶಸ್ತಿ

ಹೋಟೆಲ್‌ ಕನ್ನಡ, ಬೆಂಗಳೂರು: ಬೆಂಗಳೂರು ಹೋಟೆಲುಗಳ ಸಂಘವು ಹೋಟೆಲ್ ಉದ್ಯಮದಲ್ಲಿ ವಿಶೇಷ ಸೇವೆ ಸಲ್ಲಿಸಿರುವ ಹಿರಿಯ ಸದಸ್ಯರಿಗೆ ನೀಡುವ ʼಉದ್ಯಮ ಚೇತನʼ ಪ್ರಶಸ್ತಿಗೆ ಹಿರಿಯ ಹೋಟೆಲೋದ್ಯಮಿ ಪ್ರಭಾಕರ್‌ ಎನ್‌. ಹೆಗಡೆ ಅವರು ಭಾಜನರಾಗಿದ್ದಾರೆ.

ರಾಜಧಾನಿ ಬೆಂಗಳೂರಿನ ಕೆ.ಜಿ.ರಸ್ತೆಯ ʼಬೆಂಗಳೂರು ಗೇಟ್ʼ ಹೋಟೆಲ್‌ನಲ್ಲಿ ನ.13ರಂದು ನಡೆದ ಬೆಂಗಳೂರು ಹೋಟೆಲುಗಳ ಸಂಘದ 91ನೇ ವಾರ್ಷಿಕ ಸರ್ವಸದಸ್ಯರ ಸಭೆಯ ಸಂದರ್ಭದಲ್ಲಿ ಬೆಂಗಳೂರು ನಗರದ ಮಾಜಿ ಪೊಲೀಸ್ ಆಯುಕ್ತರಾದ ಭಾಸ್ಕರ್ ರಾವ್ ಅವರು ಪ್ರಭಾಕರ್‌ ಹೆಗಡೆ ಅವರಿಗೆ ʼಉದ್ಯಮ ಚೇತನʼ ಪ್ರಶಸ್ತಿ ಪ್ರದಾನ ಮಾಡಿದರು.

ಇದೂ ಓದಿ: ಕರ್ನಾಟಕದ ಹೋಟೆಲೋದ್ಯಮ ಭಾರತಕ್ಕೆ ಮಾದರಿ: ಮಾಜಿ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌

ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಜಾಗನಳ್ಳಿಯ ಪ್ರಭಾಕರ್ ನಾರಾಯಣ ಹೆಗಡೆ ಅವರು ಮೂಲತಃ ಕೃಷಿ ಹಿನ್ನೆಲೆಯವರು. ಶಿರಸಿಯ ಸರ್ಕಾರಿ ಶಾಲೆಯಲ್ಲಿ ಹತ್ತನೇ ತರಗತಿವರೆಗೆ ವಿದ್ಯಾಭ್ಯಾಸ ಪೂರೈಸಿ, ತಮ್ಮ 27ನೇ ವಯಸ್ಸಿನವರೆಗೂ ಊರಿನಲ್ಲೇ ಅಡಿಕೆ-ಭತ್ತದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದ ಇವರು, 1982ರಲ್ಲಿ ಉದ್ಯೋಗವನ್ನರಸಿ ಬೆಂಗಳೂರಿಗೆ ಆಗಮಿಸಿದರು. ಆರಂಭದಲ್ಲಿ ‘ಎಸ್.ಪಿ. ಟ್ರೇಡಿಂಗ್ ಕಾರ್ಪೊರೇಷನ್’ನಲ್ಲಿ ಸೇಲ್ಸ್ ರೆಪ್ರೆಸೆಂಟೇಟಿವ್ ಆಗಿ ಕರ್ನಾಟಕ ಮತ್ತು ಕೇರಳ ವಿಭಾಗದಲ್ಲಿ ಎರಡು ವರ್ಷಗಳ ಕಾಲ ಕೆಲಸ ಮಾಡಿದರು.

ಯಾರ ಕೈಕೆಳಗೂ ಕೆಲಸ ಮಾಡದೆ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಬೇಕೆಂಬ ಛಲದಿಂದ, 1984ರಲ್ಲಿ ಜಯನಗರದ ಮೂರನೇ ಬ್ಲಾಕ್‌ನ ಎಲ್ಐಸಿ ಕಾಲನಿಯಲ್ಲಿ ಕೇವಲ 15 ಪೈಸೆಗೆ ಕಾಫಿ ಮಾರುವ ‘ಗಜಾನನ ಕಾಫಿ ಬಾರ್’ ಆರಂಭಿಸುವ ಮೂಲಕ ಹೋಟೆಲ್ ಉದ್ಯಮಕ್ಕೆ ಪ್ರವೇಶಿಸಿದರು.

ಇದೂ ಓದಿ: ʼಹಳ್ಳಿಮನೆʼ ಸಂಜೀವ ರಾವ್‌ ಅವರಿಗೆ ʼಬಿಎಚ್‌ಎ ಜೀವಮಾನದ ಸಾಧನೆ ಪ್ರಶಸ್ತಿʼ

ಹವ್ಯಕ ಬ್ರಾಹ್ಮಣ ಸಮಾಜದ ಇವರು ಹೋಟೆಲ್ ಉದ್ಯಮದ ಯಾವುದೇ ಹಿನ್ನೆಲೆ ಇಲ್ಲದಿದ್ದರೂ, ಶ್ರದ್ಧೆಯಿಂದ ದುಡಿದು ಪಟ್ಟುಗಳನ್ನು ಅರಿತರು. ಬಳಿಕ 1986ರಲ್ಲಿ ಮಾಗಡಿ ಮುಖ್ಯರಸ್ತೆಯಲ್ಲಿ ‘ರಾಘವೇಂದ್ರ ರೆಸ್ಟೋರೆಂಟ್’ ಆರಂಭಿಸಿದರು. ಕೇವಲ 400 ಚದರ ಅಡಿಯಲ್ಲಿದ್ದ ಈ ಹೋಟೆಲನ್ನು 1600 ಚದರ ಅಡಿಗೆ ವಿಸ್ತರಿಸಿದ್ದಲ್ಲದೆ, 1996ರಲ್ಲಿ ಆ ಜಾಗವನ್ನೇ ಖರೀದಿಸುವ ಮಟ್ಟಿಗೆ ಆರ್ಥಿಕವಾಗಿ ಬೆಳೆದರು.

ತದನಂತರ 2006ರಲ್ಲಿ ಜಯನಗರ 9ನೇ ಬ್ಲಾಕ್‌ನ ರಾಗಿಗುಡ್ಡ ಪ್ರವೇಶ ದ್ವಾರ ಎದುರುಗಡೆ ಸ್ವಂತ ಜಾಗ ಖರೀದಿಸಿ ‘ರಾಘವೇಂದ್ರ ಉಪಾಹಾರ’ ಹೋಟೆಲ್ ಆರಂಭಿಸಿದರು. ಪ್ರಸ್ತುತ ಇದು ಕಳೆದ 20 ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಯುತ್ತಿದ್ದು, ಇವರು ಈಗಲೂ ಇದೇ ಹೋಟೆಲ್‌ನ ಉಸ್ತುವಾರಿಯಲ್ಲಿ ಸಕ್ರಿಯರಾಗಿದ್ದಾರೆ.

ಇದೂ ಓದಿ: ಹತ್ತು ಲಕ್ಷ ರೂ. ಮೌಲ್ಯದ ಚಿನ್ನದ ಸರ ಗ್ರಾಹಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಹೋಟೆಲ್‌ ಕಾರ್ಮಿಕ

ಉದ್ಯಮದಲ್ಲಿ ಯಶಸ್ಸು ಕಾಣುತ್ತ ಬದುಕು ಕಟ್ಟಿಕೊಂಡಿದ್ದಲ್ಲದೆ, ಸಮಾಜದವರ ಕಷ್ಟ-ಸುಖಗಳಿಗೂ ಸ್ಪಂದಿಸುತ್ತಿದ್ದಾರೆ. ತಮ್ಮ ಹವ್ಯಕ ಸಮಾಜದಲ್ಲಿ ಮದುವೆ ಸಂಬಂಧಗಳನ್ನು ಬೆಸೆಯುವುದರಿಂದ ಹಿಡಿದು, ಮನೆ ಕಟ್ಟುವ ವಿಚಾರವಿರಲಿ ಅಥವಾ ಇನ್ನಾವುದೇ ಕಷ್ಟಗಳಿರಲಿ, ಸಹಾಯ ಕೋರಿ ಬರುವವರಿಗೆ ಸದಾ ನೆರವಾಗುತ್ತಾರೆ. ಸ್ವರ್ಣವಲ್ಲೀ ಮಠದ ಸಕ್ರಿಯ ಭಕ್ತರಾಗಿರುವ ಇವರು, ‘ಭಗವದ್ಗೀತಾ ಅಭಿಯಾನ’ದಂತಹ ಬೃಹತ್ ಕಾರ್ಯಕ್ರಮಗಳ ಆಯೋಜನೆಯಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿದ್ದಾರೆ.

ಪ್ರಭಾಕರ್ ಎನ್‌. ಹೆಗಡೆ ಅವರಿಗೆ ಉದ್ಯಮ ಚೇತನ ಪ್ರಶಸ್ತಿ ಪ್ರದಾನ.

ಬೆಂಗಳೂರು ಹೋಟೆಲುಗಳ ಸಂಘದಲ್ಲಿ ಸಮಿತಿ ಸದಸ್ಯರಾಗಿಯೂ ಸಕ್ರಿಯವಾಗಿರುವ ಇವರು, ಹೋಟೆಲ್ ಉದ್ಯಮಕ್ಕೆ ಬರುವ ಹೊಸಬರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತಾ ಬೆನ್ನೆಲುಬಾಗಿ ನಿಂತಿದ್ದಾರೆ. ಇದಲ್ಲದೆ, ತಮ್ಮ ಊರಿನ ದೇವಸ್ಥಾನಗಳ ಜೀರ್ಣೋದ್ಧಾರ ಹಾಗೂ ತಾವು ಓದಿದ ಶಾಲೆಯ ಅಭಿವೃದ್ಧಿಗೂ ಉದಾರವಾಗಿ ಧನಸಹಾಯ ಮಾಡುವ ಮೂಲಕ ತಮ್ಮ ಸಾಮಾಜಿಕ ಕಳಕಳಿ ಮೆರೆದಿದ್ದಾರೆ.

ಇದೂ ಓದಿ: ಎಫ್‌ಕೆಸಿಸಿಐ ಚುನಾವಣೆಯಲ್ಲಿ ಆತಿಥ್ಯ ಕ್ಷೇತ್ರದ ನಾಲ್ವರು ನಿರ್ದೇಶಕರಾಗಿ ಆಯ್ಕೆ

ತಮ್ಮ 30ನೇ ವಯಸ್ಸಿನಲ್ಲಿ ಹೋಟೆಲ್ ರಂಗಕ್ಕೆ ಪ್ರವೇಶಿಸಿದ ಪ್ರಭಾಕರ್ ಹೆಗಡೆ ಅವರಿಗೆ ಈಗ ಈ ಉದ್ಯಮದಲ್ಲಿ ಬರೋಬ್ಬರಿ 42 ವರ್ಷಗಳ ಸುದೀರ್ಘ ಅನುಭವ ಇದೆ. ಹೋಟೆಲ್ ಉದ್ಯಮ ಕೇವಲ ವ್ಯವಹಾರವಲ್ಲ, ಅದರಿಂದ ಸಾಮಾಜಿಕ, ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಮೌಲ್ಯಗಳನ್ನೂ ಕಲಿಯಬಹುದು ಎಂಬುದನ್ನು ಅರಿತಿರುವ ಇವರು, ಆ ಮೌಲ್ಯಗಳನ್ನು ಮರಳಿ ಸಮಾಜಕ್ಕೆ ಧಾರೆ ಎರೆದಿದ್ದಾರೆ.

ಪ್ರಭಾಕರ್‌ ಹೆಗಡೆಯವರು 1992ರಲ್ಲಿ ಗೀತಾ ಅವರನ್ನು ವಿವಾಹವಾದರು. ಈ ದಂಪತಿಯ ಏಕಮಾತ್ರ‌ ಪುತ್ರ ವಿನಯ್ ಇಂಜಿನಿಯರಿಂಗ್ ಹಾಗೂ ಅಮೆರಿಕದಲ್ಲಿ ಎಂ.ಎಸ್. ಪದವಿ ಪೂರೈಸಿ ಪ್ರಸ್ತುತ ಜರ್ಮನಿಯಲ್ಲಿ ಉನ್ನತ ಉದ್ಯೋಗದಲ್ಲಿದ್ದಾರೆ.

ಇದೂ ಓದಿ: ಹೋಟೆಲ್‌ ಕನ್ನಡ: ಇದು ಕನ್ನಡಿಗ, ಕರ್ನಾಟಕದ ಹೋಟೆಲಿಗರ ಸುದ್ದಿದರ್ಶಿನಿ

ಇದೂ ಓದಿ: ‘ದರ್ಶಿನಿ ಬ್ರಹ್ಮ’ ಆರ್. ಪ್ರಭಾಕರ್‌ ಅವರಿಗೆ ‘ಅಸಾಮಾನ್ಯ ಕನ್ನಡಿಗ’ ಪುರಸ್ಕಾರ

ಇದೂ ಓದಿ: ಹೋಟೆಲೋದ್ಯಮಿಯ ನೇತೃತ್ವದಲ್ಲಿ ಬೃಹತ್‌ ದೇವತಾ ಕಾರ್ಯ, ನೀಲನಕ್ಷೆ ಅನಾವರಣ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ