ಒಳಗೇನಿದೆ!?

ಕೆಲವು ಸ್ಟಾರ್‌ ಹೋಟೆಲ್‌ಗಳಲ್ಲಿ ಅವಧಿ ಮೀರಿದ ಆಹಾರ ಪದಾರ್ಥ, ಸ್ವಚ್ಛತೆ ಇರದ ಕಿಚನ್!

ಸಾಂಕೇತಿಕ ಚಿತ್ರ

ಹೋಟೆಲ್‌ ಕನ್ನಡ, ಬೆಂಗಳೂರು: ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಐಷಾರಾಮಿ ಹೋಟೆಲ್‌ಗಳಾದ ತಾಜ್ ಯಶವಂತಪುರ, ಶಾಂಗ್ರಿ-ಲಾ ಸೇರಿದಂತೆ ಹಲವು ತ್ರೀ-ಸ್ಟಾರ್ ಹಾಗೂ ಫೈವ್-ಸ್ಟಾರ್ ಹೋಟೆಲ್‌ಗಳಲ್ಲಿ ಅವಧಿ ಮುಗಿದ ಹಾಲು, ಕೊಳೆತ ಮಾಂಸ ಮತ್ತು ಫಂಗಸ್ ಬಂದ ತರಕಾರಿಗಳು ಪತ್ತೆಯಾಗಿವೆ.

ಆರೋಗ್ಯ ಸಚಿವ ಯು.ಟಿ.ಖಾದರ್‌ ಅವರ ಮಾರ್ಗದರ್ಶನದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಆಹಾರ ಸುರಕ್ಷತೆ ವಿಭಾಗದಿಂದ ನಡೆಸಿದ ದಾಳಿ ವೇಳೆ ಇವು ಪತ್ತೆಯಾಗಿವೆ.

ಸರ್ಕಾರಿ ಅಧಿಕಾರಿಗಳನ್ನು ಒಳಗೊಂಡ 30 ತಂಡಗಳು ಬಿಬಿಎಂಪಿ ವ್ಯಾಪ್ತಿಯ 26 ಹೋಟೆಲ್‌ಗಳ ಮೇಲೆ ಆಗಸ್ಟ್‌ 7ರ ಶುಕ್ರವಾರ ದಿಢೀರ್ ದಾಳಿ ಮಾಡಿ ಪರಿಶೀಲನೆ ನಡೆಸಿವೆ. ಈ ವೇಳೆ ಕೋಳಿ-ಕುರಿ ಮಾಂಸ, ಮೀನು, ಎಣ್ಣೆ ಸೇರಿದಂತೆ 35 ಆಹಾರ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

ಇದೂ ಓದಿ: ಹೋಟೆಲ್‌ ಉದ್ಯಮಿಗಳಿಗೆ ಸ್ಪಂದಿಸಲು ಮೂರು ಸಹಾಯ ಕೇಂದ್ರ ತೆರೆದ ಸ್ವಿಗ್ಗಿ; ಇಲ್ಲಿದೆ ವಿವರ..

ಸ್ವಚ್ಛತೆ ಇರದ ಅಡುಗೆಮನೆ, ಅವಧಿ ಮುಗಿದ ಉತ್ಪನ್ನಗಳ ಬಳಕೆ, ಎಫ್‌ಎಸ್‌ಎಸ್‌ಎಐ ಲೇಬಲ್ ಉಲ್ಲಂಘನೆ ಮತ್ತು ಸಸ್ಯಾಹಾರ-ಮಾಂಸಾಹಾರಗಳನ್ನು ಒಟ್ಟಿಗೆ ಸಂಗ್ರಹಿಸಿರುವುದು ತಪಾಸಣೆ ವೇಳೆ ಬೆಳಕಿಗೆ ಬಂದಿವೆ.

ದೊಡ್ಡ ಹೋಟೆಲ್‌ಗಳು ಕೂಡ ಆಹಾರ ಸುರಕ್ಷತಾ ನಿಯಮ ಪಾಲಿಸುವುದನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

ಇದೂ ಓದಿ:ಸಮಸ್ಯೆ ಬಗೆಹರಿಯದಿದ್ದರೆ ಆ.15ರಿಂದ ಸ್ವಿಗ್ಗಿ-ಜೊಮ್ಯಾಟೊ ಜೊತೆ ಹೋಟೆಲಿಗರ ವ್ಯವಹಾರ ಸಂಪೂರ್ಣ ಬಂದ್‌

ಹೋಟೆಲ್‌ಗಳಿಂದ ಭಾರಿ ಪ್ರಮಾಣದ ಬಳಕೆಗೆ ಯೋಗ್ಯವಲ್ಲದ ಆಹಾರ ಜಪ್ತಿ ಮಾಡಿ ನಾಶಪಡಿಸಲಾಗಿದೆ. ನಿಯಮ ಉಲ್ಲಂಘಿಸಿದ ಹೋಟೆಲ್‌ಗಳಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ವರದಿ ಆಧರಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ನಾವು ಪಂಚತಾರಾ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದರೆ, ‘ಪ್ರತಿಷ್ಠಿತ ಹೋಟೆಲ್‌ಗಳನ್ನೇ ಬಿಡುತ್ತಿಲ್ಲ ಎಂದ ಮೇಲೆ ನಮ್ಮನ್ನೂ ಬಿಡುವುದಿಲ್ಲ’ ಎಂಬ ಭಯ ಸಣ್ಣ ಹೋಟೆಲ್‌ಗಳಲ್ಲಿ ತಾನಾಗಿಯೇ ಮೂಡುತ್ತದೆ.
| ಯು.ಟಿ.ಖಾದರ್‌, ಆರೋಗ್ಯ ಸಚಿವ

ಇದೂ ಓದಿ: ಸೌಟು ಹಿಡಿದಿದ್ದ ಕೈಯಲ್ಲೀಗ ಬೃಹತ್‌ ಸಾರಿಗೆ ಸಂಘಟನೆಯ ಸ್ಟೇರಿಂಗ್!

ಹೋಟೆಲೊಂದರಲ್ಲಿ ಅಧಿಕಾರಿಗಳಿಂದ ತಪಾಸಣೆ
ತಪಾಸಣೆ ವೇಳೆ ಕಂಡುಬಂದ ಕೆಲ ಉಲ್ಲಂಘನೆಗಳು
  • ಅಡುಗೆಮನೆ ಹಾಗೂ ಆಹಾರ ಸಂಗ್ರಹಣಾ ಸ್ಥಳಗಳಲ್ಲಿ ಸ್ವಚ್ಛತೆ ಇಲ್ಲದಿರುವುದು.
  • ಎಫ್‌ಎಸ್‌ಎಸ್ಎಐ  ನಿಯಮಗಳಿಗೆ ಅನುಗುಣವಾಗಿರದ ಮಾಂಸದ ಉತ್ಪನ್ನಗಳ ಲೇಬಲಿಂಗ್.
  • ಅವಧಿ ಮೀರಿದ ಹಾಲಿನ ಉತ್ಪನ್ನಗಳು, ಬೇಕರಿ ಉತ್ಪನ್ನಗಳು, ಕೋಳಿ ಮಾಂಸ, ಮೀನು, ಮಾಂಸ ಹಾಗೂ ತರಕಾರಿಗಳ ಸಂಗ್ರಹ.
  • ಸಸ್ಯಾಹಾರ ಹಾಗೂ ಮಾಂಸಾಹಾರ ಪದಾರ್ಥಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸದೇ ಇರುವುದು.
  • ತಪ್ಪು ಲೇಬಲ್ ಹೊಂದಿರುವ ಆಹಾರ ಉತ್ಪನ್ನಗಳು.
  • ಶಿಲೀಂಧ್ರ ಬಾಧಿತ ತರಕಾರಿ ಮತ್ತು ಆಹಾರ ಪದಾರ್ಥಗಳ ಸಂಗ್ರಹಣೆ.
  • ಪ್ಯಾಕೇಜ್‌ ಮಾಡಿದ ಆಹಾರ ಪದಾರ್ಥಗಳಲ್ಲಿ ಎಫ್‌ಎಸ್‌ಎಸ್‌ಎಐ ನಿಯಮಾನುಸಾರ ಕಡ್ಡಾಯ ಲೇಬಲಿಂಗ್ ಇಲ್ಲದಿರುವುದು.

ಇದೂ ಓದಿ: ಹೋಟೆಲೋದ್ಯಮಿಯ ನೇತೃತ್ವದಲ್ಲಿ ಬೃಹತ್‌ ದೇವತಾ ಕಾರ್ಯ, ನೀಲನಕ್ಷೆ ಅನಾವರಣ

ವಶಪಡಿಸಿಕೊಂಡ ಆಹಾರ ಪದಾರ್ಥಗಳು
  • ದಿ ಲಲಿತ್‌ ಅಶೋಕ್‌ (ಅನೆಕ್ಸ್‌ ಸೌತ್): ಒಟ್ಟು 76 ಕೆ.ಜಿ. ಮಾಂಸ, 200 ಕೆ.ಜಿ. ತರಕಾರಿ ಜಪ್ತಿ, 32 ಲೀಟರ್‌ ಅವಧಿ ಮೀರಿದ ಹಾಲು ವಶಪಡಿಸಿಕೊಂಡು ನಾಶಪಡಿಸಲಾಯಿತು.
  • ಶಾಂಗ್ರಿ-ಲಾ ಬೆಂಗಳೂರು: 15 ಕೆ.ಜಿ. ಮಾಂಸ ಜಪ್ತಿ.
  • ಫೋರ್‌ ಸೀಸನ್ಸ್ ಹೋಟೆಲ್‌: 19 ಕೆ.ಜಿ. ಮಾಂಸ ಜಪ್ತಿ.
  • ತಾಜ್ ವಿವಾಂತ, ಬೆಂಗಳೂರು ವೈಟ್‌ಫೀಲ್ಡ್: ಅವಧಿ ಮೀರಿದ 3 ಕೆ.ಜಿ. ಬೇಕರಿ ಉತ್ಪನ್ನಗಳು.
  • ತಾಜ್ ಯಶವಂತಪುರ: 72 ಕೆ.ಜಿ. ಮಾಂಸ /ಮೀನು ಜಪ್ತಿ.
  • ಹೋಟೆಲ್ ಅಟ್ರಿಯಾ: 50 ಕೆ.ಜಿ. ಕೋಳಿ ಮಾಂಸ, 25 ಕೆ.ಜಿ. ಮಾಂಸ, 23 ಕೆ.ಜಿ. ಮೀನು ಹಾಗೂ 7 ಕೆ.ಜಿ. ತರಕಾರಿ ಸೇರಿ ಒಟ್ಟು 105 ಕೆ.ಜಿ. ಅವಧಿ ಮೀರಿದ ಆಹಾರ ಪದಾರ್ಥಗಳ ಜಪ್ತಿ.

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಇದೂ ಓದಿ: ಕಾಫಿಗಿದೆ ಸಾವನ್ನೂ ಮುಂದೂಡುವ ಶಕ್ತಿ: ಕಾಫಿ ಹೇಗಿರಬೇಕು, ಎಷ್ಟು ಕುಡಿಯಬೇಕು?

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ