ಒಳಗೇನಿದೆ!?

ಹಾಲಿನ ದರ ಏರಿಕೆ: ಹೋಟೆಲ್‌ಗಳಲ್ಲಿ ಕಾಫಿ-ಟೀ, ತಿಂಡಿ-ತಿನಿಸುಗಳ ದರ ಹೆಚ್ಚಳ ಅನಿವಾರ್ಯ

ಹೋಟೆಲ್‌ ಕನ್ನಡ, ಬೆಂಗಳೂರು: ಪ್ರತಿ ಲೀಟರ್ ಹಾಲಿಗೆ 8 ರೂ. ಏಕಾಏಕಿ ಹೆಚ್ಚಳ ಮಾಡಿರುವುದನ್ನು ಬೆಂಗಳೂರು ಹೋಟೆಲುಗಳ ಸಂಘ(ಬಿಎಚ್‌ಎ) ಖಂಡಿಸಿದ್ದು, ಕಾಫಿ-ಟೀ ಸೇರಿದಂತೆ ಹೋಟೆಲ್ ತಿಂಡಿ-ತಿನಿಸುಗಳ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ ಎಂದು ಸ್ಪಷ್ಟಪಡಿಸಿದೆ.

ಗುರುವಾರ ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಂಘವು, ಹಾಲಿನ ದರ ಏರಿಕೆಯನ್ನು ಕೇವಲ 2 ರಿಂದ 3 ರೂ.ಗಳಿಗೆ ಸೀಮಿತಗೊಳಿಸಿದ್ದರೆ ಹೋಟೆಲ್‌ಗಳಲ್ಲಿ ದರ ಏರಿಸುವ ಅಗತ್ಯ ಇರುತ್ತಿರಲಿಲ್ಲ. ಆದರೆ ಇತಿಹಾಸದಲ್ಲೇ ಮೊದಲ ಬಾರಿಗೆ 8 ರೂಪಾಯಿಗಳಷ್ಟು ಭಾರಿ ಪ್ರಮಾಣದ ಬೆಲೆ ಏರಿಕೆ ಮಾಡಿರುವುದರಿಂದ ಹಾಲಿನಿಂದ ತಯಾರಾಗುವ ಎಲ್ಲ ಆಹಾರ ಮತ್ತು ಪಾನೀಯಗಳ ಬೆಲೆ ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ತಿಳಿಸಿದೆ.

ಇದೂ ಓದಿ: ಹತ್ತು ಲಕ್ಷ ರೂ. ಮೌಲ್ಯದ ಚಿನ್ನದ ಸರ ಗ್ರಾಹಕರಿಗೆ ಮರಳಿಸಿ ಪ್ರಾಮಾಣಿಕತೆ ಮೆರೆದ ಹೋಟೆಲ್‌ ಕಾರ್ಮಿಕ

ಹಾಲಿನ ಜೊತೆಗೆ ದಿನದಿಂದ ದಿನಕ್ಕೆ ಅಕ್ಕಿಯ ಬೆಲೆಯೂ ಹೆಚ್ಚಳವಾಗುತ್ತಿದ್ದು, ಅದು ಕೂಡ ನಿಯಂತ್ರಣಕ್ಕೆ ಬಾರದ ಕಾರಣ ಹೋಟೆಲ್‌ಗಳಲ್ಲಿ ದರ ಏರಿಕೆ ಮಾಡಲೇಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಂಘವು ಅಸಹಾಯಕತೆ ವ್ಯಕ್ತಪಡಿಸಿದೆ.

ಇದೂ ಓದಿ: ಪ್ರತಿ ಲೀಟರ್‌ ಹಾಲಿಗೆ ಎಂಟು ರೂಪಾಯಿ ಹೆಚ್ಚಳ; ಪರಿಷ್ಕೃತ ದರ ನ.1ರಂದು ಜಾರಿ

ಪೌಷ್ಟಿಕ ಆಹಾರವಾಗಿ ಹಾಲು ಉಪಯೋಗಿಸುವ ಜನಸಾಮಾನ್ಯರಿಗೆ, ಹಿರಿಯ ನಾಗರಿಕರಿಗೆ, ಗರ್ಭಿಣಿಯರಿಗೆ ಹಾಗೂ ಮಕ್ಕಳಿಗೆ ಈ ಭಾರಿ ದರ ಏರಿಕೆ ಬಹುದೊಡ್ಡ ಹೊಡೆತ ನೀಡಲಿದೆ. ಸರ್ಕಾರವು ಡೇರಿ ಉದ್ಯಮದ ಆಡಳಿತಾತ್ಮಕ ವೆಚ್ಚವನ್ನು ಹತೋಟಿಗೆ ತರುವ ಜೊತೆಗೆ ರೈತರಿಗೆ ಪ್ರೋತ್ಸಾಹ ಧನ ನೀಡುವ ಮೂಲಕ ಬೆಲೆ ಏರಿಕೆಯನ್ನು ಸೀಮಿತಗೊಳಿಸಬೇಕು ಎಂದು ಸಂಘ ಆಗ್ರಹಿಸಿದೆ.

ಇದೂ ಓದಿ: ಈ ತಿಂಗಳಾಂತ್ಯದಲ್ಲೇ ಫುಡ್ ಡೆಲಿವರಿ ಕ್ಷೇತ್ರಕ್ಕೆ ಫ್ಲಿಪ್‌ಕಾರ್ಟ್ ಲಗ್ಗೆ?: ಜೊಮ್ಯಾಟೊ-ಸ್ವಿಗ್ಗಿಗೆ ಸವಾಲು..

ನಮ್ಮ ಹೆಮ್ಮೆಯ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಮೇಲೆ ಇಷ್ಟು ದೊಡ್ಡ ಪ್ರಮಾಣದ ಬೆಲೆ ಏರಿಕೆ ಮಾಡುವಾಗ ಜನಸಾಮಾನ್ಯರ ಬಗ್ಗೆ ಸರ್ಕಾರ ಒಮ್ಮೆ ಚಿಂತನೆ ನಡೆಸಬೇಕು ಎಂದು ಬೆಂಗಳೂರು ಹೋಟೆಲುಗಳ ಸಂಘದ ಗೌರವಾಧ್ಯಕ್ಷ ಪಿ.ಸಿ. ರಾವ್, ಅಧ್ಯಕ್ಷ ಎಚ್‌.ಎಸ್.ಸುಬ್ರಹ್ಮಣ್ಯ ಹೊಳ್ಳ  ಮತ್ತು ಗೌರವ ಕಾರ್ಯದರ್ಶಿ ವೀರೇಂದ್ರ ಎನ್. ಕಾಮತ್ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಇದೂ ಓದಿ: ಆಹಾರದಲ್ಲಿ ಕೂದಲು: ಪ್ರಶ್ನಿಸಿದ ಕನ್ನಡಿಗರ ಮೇಲೆ ಒಡಿಶಾದ ಪುರಿ ಹೋಟೆಲ್‌ನಲ್ಲಿ ತೀವ್ರ ಹಲ್ಲೆ

ಇದೂ ಓದಿ: ಹೋಟೆಲ್-ಪ್ರವಾಸೋದ್ಯಮ ಕ್ಷೇತ್ರದ ಗಣ್ಯರ ಜೊತೆ ಚರ್ಚಿಸಿದ ಸಿಎಂ; ಇಲ್ಲಿದೆ ಸಂಪೂರ್ಣ ವಿವರ..

ಇದೂ ಓದಿ: ಪ್ರವಾಸಿ ತಾಣಗಳಲ್ಲಿ ಸದ್ಯದಲ್ಲೇ ಕೆಎಸ್‌ಟಿಡಿಸಿಯ ‘ಮಯೂರ ರುಚಿ ಆನ್ ವೀಲ್ಸ್’ ಆರಂಭ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ