ಒಳಗೇನಿದೆ!?

ಮತ್ತದೇ ಬೇಸರ.. ಮನಸು ಗಾಂಧಿಬಜಾರು.. ಮರಳೀತೇ ನಿತ್ಯೋತ್ಸವ?

ಬಿಕೋ ಎನ್ನುತ್ತಿರುವ ಗಾಂಧಿಬಜಾರು

ಹೋಟೆಲ್‌ ಕನ್ನಡ, ಬೆಂಗಳೂರು: ದೊಡ್ಡ ಗಣಪತಿ ದೇವಸ್ಥಾನ ಇರುವ ಬಸವನಗುಡಿ ರಸ್ತೆಗೆ ಲಂಬವಾಗಿರುವ ಗಾಂಧಿಬಜಾರ್‌ ಮುಖ್ಯರಸ್ತೆಯಲ್ಲಿ ʼದೊಡ್ಡದೇನೋ ಮಾಡುತ್ತೇವೆʼ ಎಂದು ಹೊರಟು ಕೊನೆಗೆ ಮಾಡಿದ್ದೇನು ಎಂದರೆ “ಗಣೇಶನನ್ನು ಮಾಡಲು ಹೋಗಿ ಅವರಪ್ಪನನ್ನು ಮಾಡಿದಂತೆ” ಎಂಬ ಮಾತು ನೆನಪಾಗುತ್ತದೆ.

ಏಕೆಂದರೆ ಗಾಂಧಿಬಜಾರ್‌ಗೆ ಹೊಸರೂಪ ಕೊಡುತ್ತೇವೆ ಎಂದು ಹೇಳಿ ವರ್ಷಗಟ್ಟಲೆ ಕಾಮಗಾರಿ ನಡೆಸಿದವರು ಕೊನೆಗೂ ಒಂದು ಹೊಸ ರೂಪ ಕೊಟ್ಟರೂ ಅದರಿಂದ ಗಾಂಧಿಬಜಾರಿನ ವರ್ತಕರು, ಪಾದಚಾರಿಗಳು ಸೇರಿದಂತೆ ಯಾರಿಗೂ ಅಂಥ ಪ್ರಯೋಜನವಾಗಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.‌

ಇದೂ ಓದಿ:ಸಮಸ್ಯೆ ಬಗೆಹರಿಯದಿದ್ದರೆ ಆ.15ರಿಂದ ಸ್ವಿಗ್ಗಿ-ಜೊಮ್ಯಾಟೊ ಜೊತೆ ಹೋಟೆಲಿಗರ ವ್ಯವಹಾರ ಸಂಪೂರ್ಣ ಬಂದ್‌

ಅದರಲ್ಲೂ ಒಂದುಕಾಲದಲ್ಲಿ ಗಿಜಿಗುಡುತ್ತಿದ್ದ, ಉತ್ತಮ ವ್ಯಾಪಾರದ ಹಾಗೂ ಜನಾಕರ್ಷಣೆಯ ಪ್ರದೇಶವಾಗಿದ್ದ ಗಾಂಧಿಬಜಾರು ಈಗ ನವೀಕರಣದ ಬಳಿಕ ಅಕ್ಷರಶಃ ಬಿಕೋ ಎನಿಸಲಾರಂಭಿಸಿದೆ.

ಬಿಕೋ ಎನ್ನುತ್ತಿರುವ ಗಾಂಧಿಬಜಾರು..

ಫುಟ್‌ಪಾತ್‌ ದೊಡ್ಡದಾಗಿಸಿ, ಹಣ್ಣು-ತರಕಾರಿ ಮಾರಲು ಜಾಗ ಮಾಡಿಕೊಡುತ್ತೇವೆ ಎಂದವರು ಹಾಗೆ ಮಾಡಿದರಾದರೂ ರಸ್ತೆಯನ್ನು ಕಿರಿದಾಗಿಸಿಬಿಟ್ಟಿದ್ದಲ್ಲದೆ, ಸರಿಯಾದ ಯೋಜನೆಯೇ ಇಲ್ಲದೆ ಪೂರ್ಣಗೊಳಿಸಿದ್ದರಿಂದ ಹಲವಾರು ವರ್ಷಗಳಿಂದ ಗಾಂಧಿಬಜಾರನ್ನೇ ನೆಚ್ಚಿಕೊಂಡಿದ್ದ ಉದ್ಯಮಿಗಳು, ಹೋಟೆಲಿಗರು, ಸಣ್ಣಪುಟ್ಟ ವರ್ತಕರು ಈಗ ತಮ್ಮ ಭವಿಷ್ಯದ ಬಗ್ಗೆ ಚಿಂತೆ ಮಾಡುವಂತಾಗಿಸಿದೆ.

ಇದೂ ಓದಿ: ದಿಗ್ಗಜ ಹೋಟೆಲಿಗರಿಗೂ ತಿಳಿಯಲಾಗಲಿಲ್ಲ ಇದೊಂದು ರಹಸ್ಯ!; ಕೆಲವು ಹೋಟೆಲ್‌ಗಳಲ್ಲಿದೆಯಾ ‘ಸ್ಥಳ ಮಹಿಮೆʼ?

ಕಿರಿದಾದ ರಸ್ತೆಯ ಇಕ್ಕೆಲಗಳಲ್ಲಿನ ಜಾಗದಲ್ಲಿ ರಸ್ತೆಬದಿ ವ್ಯಾಪಾರಿಗಳಿಗೆ ಜಾಗ ಮಾಡಿಕೊಟ್ಟಿದ್ದರೂ, ಇತ್ತೀಚೆಗೆ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ರಸ್ತೆಬದಿಯ ಅಂಗಡಿಗಳನ್ನು ತೆರವುಗೊಳಿಸಿದ್ದಾರೆ. ಮಾತ್ರವಲ್ಲದೆ, ಆ ಜಾಗದಲ್ಲಿ ಬ್ಯಾರಿಕೇಡುಗಳನ್ನು ಹಾಕಿಟ್ಟಿರುವುದರಿಂದ ಅದೀಗ ವ್ಯಾಪಾರಸ್ಥರಿಗೆ ಮಾತ್ರವಲ್ಲದೆ ಸಾರ್ವಜನಿಕರಿಗೂ ಪ್ರಯೋಜನಕ್ಕೆ ಬರದಂತಾಗಿದೆ. ಗಾಂಧಿಬಜಾರಿನ ಒಂದು ಪಾರ್ಶ್ವದಲ್ಲಿ ಈಗ ಉದ್ದಕ್ಕೂ ಅಡ್ಡಲಾಗಿ ಬ್ಯಾರಿಕೇಡುಗಳೇ ಕಾಣಿಸುತ್ತಿವೆ.

ಪಾದಚಾರಿ ಮಾರ್ಗಕ್ಕೂ ಬ್ಯಾರಿಕೇಡು..

ಇದೂ ಓದಿ: ಹೋಟೆಲ್‌ ಉದ್ಯಮಿಗಳಿಗೆ ಸ್ಪಂದಿಸಲು ಮೂರು ಸಹಾಯ ಕೇಂದ್ರ ತೆರೆದ ಸ್ವಿಗ್ಗಿ; ಇಲ್ಲಿದೆ ವಿವರ..

ನವೀಕರಣಕ್ಕೂ ಮುನ್ನ ಕಾಮಗಾರಿ ಕಾರಣಕ್ಕೆ ತಿಂಗಳುಗಟ್ಟಲೆ ವ್ಯಾಪಾರ ನಷ್ಟವಾಗಿದ್ದರೂ, ನವೀಕರಣಗೊಂಡ ಬಳಿಕ ತುಂಬಾ ಒಳ್ಳೆಯದಾಗುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದವರಿಗೆ ನಿರಾಶೆ ಉಂಟಾಗಿದೆ. ಏಕೆಂದರೆ ನವೀಕರಣದ ಬಳಿಕವೂ ಹಳೆಯ ವ್ಯಾಪಾರದ ಪರಿಸ್ಥಿತಿ ಮರಳಲಿಲ್ಲ.

ಇದೂ ಓದಿ:‘ದರ್ಶಿನಿ ಬ್ರಹ್ಮ’ ಆರ್. ಪ್ರಭಾಕರ್‌ ಅವರಿಗೆ ‘ಅಸಾಮಾನ್ಯ ಕನ್ನಡಿಗ’ ಪುರಸ್ಕಾರ

ಪಾರ್ಕಿಂಗ್‌ ಸಮಸ್ಯೆ: ರಸ್ತೆಯ ಇಕ್ಕೆಲಗಳಲ್ಲಿ ಸರಿಯಾದ ಪಾರ್ಕಿಂಗ್‌ ಇಲ್ಲ. ತುರ್ತು ಎಂದು ಅಲ್ಲಿ ಇಲ್ಲಿ ಪಾರ್ಕ್‌ ಮಾಡಿ ಹೋದರೂ ಕೆಲವೇ ನಿಮಿಷಗಳಲ್ಲಿ ಸಂಚಾರ ಪೊಲೀಸರಿಗೆ ಸಾವಿರಾರು ರೂಪಾಯಿ ದಂಡ ತೆರಬೇಕಾದ ಪರಿಸ್ಥಿತಿ ಇದೆ. ಇನ್ನು ಪ್ರತ್ಯೇಕ ಪಾರ್ಕಿಂಗ್‌ ಕಾಂಪ್ಲೆಕ್ಸ್‌ ನಿರ್ಮಿಸಿದ್ದರೂ ಅಲ್ಲಿ ದೊಡ್ಡ ಕಾರುಗಳು ಹೋಗಲು ಅನುಕೂಲಕರವಾಗಿಲ್ಲ ಎಂಬ ದೂರುಗಳೂ ಇವೆ. ಹೀಗಾಗಿ ಸಾರ್ವಜನಿಕರ ಪ್ರವೇಶಕ್ಕೂ ಹಿನ್ನಡೆಯಾಗಿದೆ.

ನವೀಕರಣಗೊಂಡ ಪ್ರದೇಶದಲ್ಲಿ ಬ್ಯಾರಿಕೇಡುಗಳು

ಇದೂ ಓದಿ:ಹೋಟೆಲೋದ್ಯಮಿಯ ನೇತೃತ್ವದಲ್ಲಿ ಬೃಹತ್‌ ದೇವತಾ ಕಾರ್ಯ, ನೀಲನಕ್ಷೆ ಅನಾವರಣ

ಬಸ್‌ ಕೂಡ ಬರುತ್ತಿಲ್ಲ: ಒಂದು ಕಾಲದಲ್ಲಿ ಗಾಂಧಿಬಜಾರು ಮುಖ್ಯರಸ್ತೆಯಲ್ಲಿ ಬಸ್‌ಗಳು ಓಡಾಡುತ್ತಿದ್ದವು. ಇದರಿಂದ ಸಮೂಹ ಸಾರಿಗೆ ಮೂಲಕ ಸಾರ್ವಜನಿಕ ಸಂಚಾರವೂ ಹೆಚ್ಚಾಗಿತ್ತು. ಈಗ ಗಾಂಧಿಬಜಾರು ಮುಖ್ಯರಸ್ತೆಯಲ್ಲಿ ಬಸ್‌ ಸಂಚಾರ ಸ್ಥಗಿತಗೊಂಡಿದೆ.  ಪರಿಣಾಮವಾಗಿ ಸಾರ್ವಜನಿಕರ ಸಂಚಾರವೂ ಕಡಿಮೆಯಾಗಿದೆ. 

ಗಾಂಧಿಬಜಾರು ಮುಖ್ಯರಸ್ತೆ ವಿದ್ಯಾರ್ಥಿಭವನ, ರೋಟಿಘರ್‌, ಅಡ್ಯಾರ್‌ ಆನಂದ ಭವನ ಮುಂತಾದ ಹಲವಾರು ವರ್ಷಗಳ ಹಿಂದಿನ ಖ್ಯಾತ ಹೋಟೆಲುಗಳಿರುವ ಹಾಗೂ ಜನಾಕರ್ಷಣೆಯ ಪ್ರಮುಖ ರಸ್ತೆ. ಒಂದು ಕಾಲದಲ್ಲಿ ಕವಿಗಳು, ಸಾಹಿತಿಗಳು ತಿಂಡಿ-ತಿನಿಸು ಸವಿಯಲು ಬರುವುದಕ್ಕೆ ಸಾಕ್ಷಿಯಾಗಿದ್ದ ರಸ್ತೆ. ಅಂಥ ರಸ್ತೆಯಲ್ಲಿ ಹಲವಾರು ವರ್ಷಗಳಿಂದ ವ್ಯಾಪಾರವನ್ನು ಜೀವನೋಪಾಯ ಆಗಿಸಿಕೊಂಡಿರುವವರಿಗೆ ಈಗ ಬಿಕೋ ಎನ್ನುತ್ತಿರುವ ಗಾಂಧಿಬಜಾರು ಅವರ ಉತ್ಸಾಹವನ್ನು ಕುಂದಿಸಿದೆ.

ಇದೂ ಓದಿ: ಬೆಂಗಳೂರು ಹೋಟೆಲುಗಳ ಸಂಘದ ಸದಸ್ಯತ್ವ ಪಡೆಯುವುದು ಹೇಗೆ? ಅದಕ್ಕೆಂದೇ ಮಾಡಲಾಗಿದೆ ಹೊಸ ಸಮಿತಿ

ʼನಿತ್ಯೋತ್ಸವ ಕವಿʼ ಎಂದೇ ಖ್ಯಾತರಾಗಿದ್ದ ಕೆ.ಎಸ್.ನಿಸಾರ್‌ ಅಹಮದ್‌ ಅವರು ಗಾಂಧಿಬಜಾರಿನ ಪ್ರೇರಣೆಯಿಂದಲೇ ʼಮನಸು ಗಾಂಧಿಬಜಾರುʼ ಎಂಬ ಕವಿತೆ ಬರೆದಿದ್ದರು. ಈಗಲೂ ಅದೆಷ್ಟೋ ಜನರಿಗೆ ʼಮತ್ತದೇ ಬೇಸರʼ ಕಾಡಿದಾಗ ಅವರ ಮನಸು ಕಾಣಲು ಬಯಸುವುದು ಗಾಂಧಿಬಜಾರನ್ನೇ. ಆದರೆ ಈಗ ಅಲ್ಲಿಲ್ಲ ಹಿಂದಿನ ಅಂದಿನ ನಿತ್ಯೋತ್ಸವ.

ಗಾಂಧಿಬಜಾರಿನ ಹಳೆಯ ಸೊಬಗು-ಸಂತೋಷ-ಸಂಭ್ರಮವನ್ನು ಕಂಡಿರುವ ಹಲವರ ಪಾಲಿಗೆ ಈಗ ಮತ್ತದೇ ಬೇಸರ.. ಮನಸು ಗಾಂಧಿ ಬಜಾರು.. ಆದರೆ ಮರಳೀತೇ ನಿತ್ಯೋತ್ಸವ?

ಇದೂ ಓದಿ: ಹೋಟೆಲ್-ಪ್ರವಾಸೋದ್ಯಮ ಕ್ಷೇತ್ರದ ಗಣ್ಯರ ಜೊತೆ ಚರ್ಚಿಸಿದ ಸಿಎಂ; ಇಲ್ಲಿದೆ ಸಂಪೂರ್ಣ ವಿವರ..

ಇದೂ ಓದಿ: ಹೋಟೆಲಿಗರಿಗೆ ಸಮಸ್ಯೆ ಆದಾಗ ನಾವಿದ್ದೇವೆ: ಬಿಎಚ್‌ಎ ನೂತನ ಅಧ್ಯಕ್ಷ ಎಚ್‌.ಎಸ್. ಸುಬ್ರಹ್ಮಣ್ಯ ಹೊಳ್ಳ

ಇದೂ ಓದಿ: ಅಮೆರಿಕದ ಪಿಟ್ಸ್‌ಬರ್ಗ್‌ನಲ್ಲಿ ಕುಂದಾಪುರದವರ ʼಉಡುಪಿ ಕೆಫೆʼ; ದ ಬೆಸ್ಟ್‌ ಹೋಟೆಲ್‌ ಎಂಬ ಮೆಚ್ಚುಗೆ

ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳಿ